
ಸ್ವಂತ ಕಾರು ಖರೀದಿಸಬೇಕು ಎನ್ನುವುದು ಪ್ರತಿ ವ್ಯಕ್ತಿಯ ಕನಸು. ಆದರೆ ಅನೇಕರು ಸಾಲದ ಮೂಲಕ ನೆಚ್ಚಿನ ಕಾರು ಖರೀದಿಗೆ ಮುಂದಾಗುತ್ತಾರೆ. ಸಾಲ ಎಂದಾಕ್ಷಣ ಕೆಲವು ವರ್ಷ ಸಾಲದ ಇಎಂಐ (ಮಾಸಿಕ ಕಂತು) ಕಟ್ಟುವುದು, ಸಾವಿರಾರು ರೂಪಾಯಿ ಬಡ್ಡಿ ಪಾವತಿಸುವುದು ಇದ್ದಿದ್ದೇ. ಎಷ್ಟೋ ಸಲ, ಸಾಲದ ಭಾರಕ್ಕೆ ಕಾರು ಕೊಂಡ ನೆಮ್ಮದಿಯೇ ಇಲ್ಲವಾಗುತ್ತದೆ. ಹಾಗಾದರೆ ಸಾಲ ಮಾಡದೆ ಕಾರು ಕೊಳ್ಳಬಹುದಾ? ಹೌದು, ಸಾಲದ ಹೊರೆ ಇಲ್ಲದೆ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ಮೂಲಕ ಕಾರು ಖರೀದಿಸಬಹುದು. ಇಲ್ಲಿ ಸಾಲದ ಭಾರವಿಲ್ಲ, ಇಎಂಐ ತಲೆಬಿಸಿಯಿಲ್ಲ, ಪಕ್ಕಾ ಹೂಡಿಕೆ ಯೋಜನೆ ಮಾಡಿದರೆ ಆಯಿತು. ನೆಚ್ಚಿನ ಕಾರು ನಿಮ್ಮದಾಗುತ್ತದೆ.
₹10 ಲಕ್ಷ ಮೌಲ್ಯದ ಕಾರು ಸಾಲಕ್ಕೆ ಬಡ್ಡಿ ಹೊರೆ ಎಷ್ಟು?: ಕಾರಿಗಾಗಿ ಸಾಲ ತೆಗೆದುಕೊಂಡಾಗ ಏನಾಗುತ್ತದೆ ಎಂದು ಒಮ್ಮೆ ನೋಡೋಣ. ಉದಾಹರಣೆಗೆ, ₹12 ಲಕ್ಷ ಮೌಲ್ಯದ ಕಾರು ಖರೀದಿಸಲು ₹2 ಲಕ್ಷ ಡೌನ್ ಪೇಮೆಂಟ್ ಮಾಡಿದ್ದೀರಿ ಎಂದುಕೊಳ್ಳೋಣ. ಇನ್ನುಳಿದ ₹10 ಲಕ್ಷವನ್ನು 5 ವರ್ಷಕ್ಕೆ ಶೇ 9ರ ಬಡ್ಡಿ ದರದಲ್ಲಿ ಸಾಲವಾಗಿ ಪಡೆದುಕೊಳ್ಳುತ್ತೀರಿ ಎಂದು ಭಾವಿಸೋಣ. ಈ ಲೆಕ್ಕಾಚಾರದಂತೆ ಪ್ರತಿ ತಿಂಗಳು ಸುಮಾರು ₹20,760 ಇಎಂಐ ಪಾವತಿಸಬೇಕಾಗುತ್ತದೆ. 5 ವರ್ಷದಲ್ಲಿ ₹10 ಲಕ್ಷ ಅಸಲಿನ ಮೊತ್ತದ ಜೊತೆಗೆ ₹2.45 ಲಕ್ಷ ಬಡ್ಡಿ ಸೇರಿ ಒಟ್ಟು ₹12.45 ಲಕ್ಷ ಪಾವತಿಸಬೇಕಾಗುತ್ತದೆ. ಕಾರು ಮೌಲ್ಯ ವೃದ್ಧಿಯಾಗುವ ಆಸ್ತಿಯಲ್ಲದ ಕಾರಣ ಕಾರಿಗಾಗಿ ಹೆಚ್ಚು ಸಾಲ ಮಾಡಿ ಬಡ್ಡಿ ಕಟ್ಟುವುದು ಸರಿಯಾದ ಹಣಕಾಸು ತೀರ್ಮಾನವಲ್ಲ.
ಎಸ್ಐಪಿ ಮೂಲಕ ಕಾರು ಖರೀದಿ ಹೇಗೆ?: ಈಗ ಕಾರು ಖರೀದಿಸಲು ₹12 ಲಕ್ಷ ಬೇಕಾಗಿದ್ದು ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ಮೂಲಕ ಅದನ್ನು ಪೇರಿಸುವ ಗುರಿ ಹೊಂದಿದ್ದೀರಿ ಎಂದುಕೊಳ್ಳೋಣ. ಮ್ಯೂಚುವಲ್ ಫಂಡ್‌ನಲ್ಲಿ ವಾರ್ಷಿಕ ಸರಾಸರಿ ಶೇ 12ರಷ್ಟು ಗಳಿಕೆ ಸಿಗುತ್ತದೆ ಎಂದು ಭಾವಿಸೋಣ. 7 ವರ್ಷಗಳಲ್ಲಿ ಗುರಿ ಮುಟ್ಟಲು ಎಷ್ಟು ಮೊತ್ತ ಹೂಡಬೇಕು, 5 ವರ್ಷಗಳಲ್ಲೇ ಕಾರು ಖರೀದಿಸಬೇಕಾದರೆ ಅದಕ್ಕೆ ಹೇಗೆ ಯೋಜನೆ ಮಾಡಬೇಕು, ಇಲ್ಲ ಮೂರೇ ವರ್ಷಗಳಲ್ಲಿ ಕಾರು ಕೊಳ್ಳಬೇಕಾದರೆ ಅದಕ್ಕೆ ನಿಮ್ಮ ಎಸ್ಐಪಿ ಹೂಡಿಕೆ ಯೋಜನೆ ಹೇಗಿರಬೇಕು ಎಂಬುದು ತಿಳಿಯಬೇಕಿದೆ.
7 ವರ್ಷಗಳ ನಂತರ ₹12 ಲಕ್ಷ ಮೌಲ್ಯದ ಕಾರು ಖರೀದಿಸಬೇಕಾದರೆ ಮಾಸಿಕ ₹10 ಸಾವಿರ ಎಸ್ಐಪಿ ಮಾಡಬೇಕಾಗುತ್ತದೆ. 7 ವರ್ಷಗಳಲ್ಲಿ ಒಟ್ಟು ಹೂಡಿಕೆ ಮೊತ್ತ ₹8.4 ಲಕ್ಷ ಆಗಿರುತ್ತದೆ. ನಿಮ್ಮ ಹೂಡಿಕೆ ಮೇಲೆ ವಾರ್ಷಿಕ ಸರಾಸರಿ ಶೇ 12ರ ಗಳಿಕೆ ಸಿಕ್ಕರೆ ₹3.6 ಲಕ್ಷ ಗಳಿಕೆ ನಿಮಗೆ ಲಭಿಸುತ್ತದೆ. ಹೂಡಿಕೆ ಮೊತ್ತ ಮತ್ತು ಗಳಿಕೆ ಮೊತ್ತ ಸೇರಿದರೆ ₹12 ಲಕ್ಷ ನಿಮ್ಮ ಬಳಿ ಇರುತ್ತದೆ. ಮುಂದಿನ 5 ವರ್ಷದಲ್ಲಿ ಕಾರು ಖರೀದಿಸಬೇಕು ಎಂಬ ಯೋಜನೆ ನಿಮ್ಮದಾಗಿದ್ದರೆ ₹12 ಲಕ್ಷ ಪೇರಿಸಲು ಪ್ರತಿ ತಿಂಗಳು ₹15 ಸಾವಿರ ಎಸ್ಐಪಿ ಮಾಡಬೇಕಾಗುತ್ತದೆ. 5 ವರ್ಷಗಳಲ್ಲಿ ಒಟ್ಟು ₹9 ಲಕ್ಷ ಹೂಡಿಕೆಯಾಗಿರುತ್ತದೆ. ಶೇ 12ರ ಲೆಕ್ಕಾಚಾರದಲ್ಲಿ ₹3 ಲಕ್ಷ ಗಳಿಕೆ ಲಭಿಸುತ್ತದೆ. ಎರಡನ್ನೂ ಒಟ್ಟುಗೂಡಿಸಿದಾಗ ನಿಮ್ಮ ಬಳಿ ₹12 ಲಕ್ಷ ಇರುತ್ತದೆ. ಮೂರೇ ವರ್ಷದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿ ₹12 ಲಕ್ಷ ಮೌಲ್ಯದ ಕಾರು ಖರೀದಿಸುವ ಯೋಜನೆ ಇದೆ ಎಂದಾದಲ್ಲಿ ಮಾಸಿಕ ₹28 ಸಾವಿರ ಹೂಡಿಕೆ ಮಾಡಬೇಕಾಗುತ್ತದೆ. ಮಾಸಿಕ ₹28 ಸಾವಿರ ಎಸ್ಐಪಿ ಮಾಡಿದಾಗ 3 ವರ್ಷಗಳಲ್ಲಿ ಒಟ್ಟು ₹10.08 ಲಕ್ಷ ಹೂಡಿಕೆಯಾಗಿರುತ್ತದೆ. ₹1.92 ಲಕ್ಷ ಗಳಿಕೆ ಸೇರಿ ಒಟ್ಟು ₹12 ಲಕ್ಷ ಲಭಿಸುತ್ತದೆ. (ಪಟ್ಟಿ ಗಮನಿಸಿ)
ಎಸ್ಐಪಿ ಹೂಡಿಕೆ ಮೂಲಕ ಕಾರು ಖರೀದಿಸಲು ಯೋಜನೆ ರೂಪಿಸುವುದು ಹೇಗೆ?
ನೀವು ಹೇಗೆ ಆಲೋಚನೆ ಮಾಡಬಹುದು?: ಎಷ್ಟು ವರ್ಷಗಳಲ್ಲಿ ಕಾರು ಖರೀದಿಸಬೇಕು ಎನ್ನುವ ಬಗ್ಗೆ ಮೊದಲು ತೀರ್ಮಾನ ಮಾಡಿ. 3 ವರ್ಷವೋ 5 ಅಥವಾ 7 ವರ್ಷವೋ ಎಂಬುದನ್ನು ನಿರ್ಧರಿಸಿ. ನಿಮ್ಮ ಗುರಿಯ ಅವಧಿಗೆ ತಕ್ಕಂತೆ ಎಸ್ಐಪಿ ಮೊತ್ತ ನಿಗದಿ ಮಾಡಿ. ಎಸ್ಐಪಿ ಮೊತ್ತವು ಅದಾಗಿಯೇ ಕಡಿತವಾಗುವಂತೆ ಮಾಡುವುದನ್ನು ಮರೆಯಬೇಡಿ. ಎಸ್ಐಪಿ ಮೊತ್ತವನ್ನು ಪ್ರತಿ ವರ್ಷ ಶೇ 10ರಷ್ಟು ಹೆಚ್ಚಿಸಿ, ಹೂಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಿ. ಹೀಗೆ ಮಾಡಿದಾಗ ಮ್ಯೂಚುವಲ್ ಫಂಡ್ ಹೂಡಿಕೆ ಮೂಲಕ ಕನಸಿನ ಕಾರು ಖರೀದಿ ಸಾಧ್ಯ. ನೆನಪಿಡಿ, ಮಾರುಕಟ್ಟೆಯಲ್ಲಿ ತಾತ್ಕಾಲಿಕ ಏರಿಳಿತಗಳಿದ್ದರೂ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳು ಶೇ 12ರಷ್ಟು ಗಳಿಕೆ ತಂದುಕೊಟ್ಟಿವೆ ಎನ್ನುವುದನ್ನು ಅಂಕಿ-ಅಂಶಗಳು ಹೇಳುತ್ತವೆ.
ದೊಡ್ಡ ಡೌನ್ ಪೇಮೆಂಟ್ ಮೂಲಕ ಕಾರು ಖರೀದಿಸಬಹುದೇ?: ನೀವು ಮುಂದಿನ 5 ವರ್ಷಗಳಲ್ಲಿ ಕಾರು ಖರೀದಿಸಬೇಕು ಎನ್ನುವ ಗುರಿ ಹೊಂದಿದ್ದೀರಿ ಎಂದುಕೊಳ್ಳೋಣ. ಆದರೆ ನಿಮಗೆ ಹೂಡಿಕೆ ಆರಂಭಿಸಿದ ಮೂರು ವರ್ಷಗಳಲ್ಲೇ ಕಾರು ಕೊಳ್ಳಬೇಕು ಎಂದು ಅನಿಸುತ್ತದೆ. ಹೀಗಿದ್ದಾಗ ನಿಮ್ಮ ಎಸ್ಐಪಿಯಲ್ಲಿರುವ ದೊಡ್ಡ ಮೊತ್ತವನ್ನು ಕಾರು ಖರೀದಿಗೆ ಡೌನ್ ಪೇಮೇಂಟ್ ರೂಪದಲ್ಲಿ ಬಳಸಿ, ಬಾಕಿ ಹಣಕ್ಕಾಗಿ ಸಣ್ಣ ಸಾಲ ಪಡೆದುಕೊಳ್ಳಬಹುದು. ಪೂರ್ತಿ ಸಾಲ ತೆಗೆದುಕೊಂಡು ಜಾಸ್ತಿ ಬಡ್ಡಿ ಕಟ್ಟುವ ಬದಲು ಇದು ಜಾಣ ನಡೆ.
ಕಿವಿಮಾತು: ಕಾರು ಮೌಲ್ಯ ಕಳೆದುಕೊಳ್ಳುವ ವಸ್ತುವಾಗಿರುವ ಕಾರಣ ಸಾಲ ಮಾಡಿ ಅದನ್ನು ಕೊಳ್ಳುವ ಮಾರ್ಗ ಸೂಕ್ತವಲ್ಲ. ಸಾಲ ಮಾಡದೆ ಕಾರು ಖರೀದಿಸಲು ಎಸ್ಐಪಿ ಒಂದು ಒಳ್ಳೆಯ ಮಾರ್ಗ. ಒಂದೊಮ್ಮೆ ಸಾಲ ಮಾಡಿಯೇ ಕಾರು ತೆಗೆದುಕೊಳ್ಳಬೇಕಾದರೆ ಒಂದು ದೊಡ್ಡ ಮೊತ್ತದ ಡೌನ್ ಪೇಮೆಂಟ್ ಜೊತೆಗೆ ಸಣ್ಣ ಮೊತ್ತದ ಸಾಲದ ಮೂಲಕ ಅದನ್ನು ಪೂರೈಸಿಕೊಳ್ಳುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.