ADVERTISEMENT

ಬಂಡವಾಳ ಮಾರುಕಟ್ಟೆ | ಗೃಹ ಸಾಲ: ಎಲ್ಲಿಂದ ಪಡೆದರೆ ಲಾಭ?

ಕಾವ್ಯ ಡಿ.
Published 10 ಆಗಸ್ಟ್ 2025, 23:53 IST
Last Updated 10 ಆಗಸ್ಟ್ 2025, 23:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸ್ವಂತದ್ದೊಂದು ಮನೆಯಿರಬೇಕು ಎನ್ನುವುದು ಬಹುಜನರ ಕನಸು. ಮನೆ ಕಟ್ಟಿಸಲು ಅಥವಾ ಖರೀದಿಸಲು ದೊಡ್ಡ ಮೊತ್ತ ಅತ್ಯಗತ್ಯ. ಪೂರ್ತಿ ಹಣ ಕೈಯಿಂದಲೇ ವ್ಯಯಿಸಿ ಮನೆ ಖರೀದಿಸಲು ಕೆಲವರಿಗಷ್ಟೇ ಸಾಧ್ಯ. ಹೆಚ್ಚಿನವರಿಗೆ ಸ್ವಂತ ಸೂರು ನಿರ್ಮಿಸುವಾಗ ಸಾಲ ಬೇಕೇಬೇಕು. ಆದರೆ ‘ಎರಡು ನಿಮಿಷದಲ್ಲಿ ಗೃಹ ಸಾಲ ಕೊಡುತ್ತೇವೆ’, ‘ನಿಮ್ಮ ಮನೆಗೇ ಬಂದು ಸಾಲ ಮಂಜೂರು ಮಾಡುತ್ತೇವೆ’ ಎನ್ನುವ ಜಾಹಿರಾತುಗಳ ಈ ಕಾಲದಲ್ಲಿ ಎಲ್ಲಿ ಸಾಲ ಪಡೆಯಬೇಕು ಎಂಬ ಗೊಂದಲ ಗ್ರಾಹಕನದ್ದು.

ಗೃಹಸಾಲ ಎನ್ನುವುದು ಹತ್ತಿಪ್ಪತ್ತು ವರ್ಷಗಳ ಜವಾಬ್ದಾರಿ. ಈ ಸಾಲವನ್ನು ಜಾಣ್ಮೆಯಿಂದ ಪಡೆದರೆ ಲಕ್ಷಗಟ್ಟಲೆ ಹಣ ಉಳಿಯುತ್ತದೆ. ಸಾಲ ಪಡೆಯುವಾಗ ಎಚ್ಚರ ತಪ್ಪಿದರೆ ಅದೇ ಹಣ ಪೋಲಾಗುತ್ತದೆ.

ADVERTISEMENT

ಎಲ್ಲಿ ಗೃಹಸಾಲ ಪಡೆದರೆ ಲಾಭ?:

ಗೃಹಸಾಲವನ್ನು ಎರಡು ಮೂಲಗಳಿಂದ ಪಡೆಯಬಹುದು. ಒಂದನೆಯದ್ದು ಬ್ಯಾಂಕ್‌ಗಳು. ಎರಡನೆಯದ್ದು ಎನ್‌ಬಿಎಫ್‌ಸಿ (ಬ್ಯಾಂಕೇತರ ಹಣಕಾಸು ಕಂಪನಿಗಳು). ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಗೃಹಸಾಲದ ಬಡ್ಡಿ ದರ ಎನ್‌ಬಿಎಫ್‌ಸಿ ಬಡ್ಡಿ ದರಕ್ಕಿಂತ ಕಡಿಮೆ ಇರುತ್ತದೆ. ಆದರೆ ಈ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಸಾಲ ಪಡೆಯುವ ವ್ಯಕ್ತಿಯ ಆರ್ಥಿಕ ಸ್ಥಿತಿಗತಿ ಅವಲೋಕಿಸಿ ಇಲ್ಲಿ ಸಾಲ ನೀಡಲಾಗುತ್ತದೆ. ಎನ್‌ಬಿಎಫ್‌ಸಿಗಳಲ್ಲಿ ಗೃಹಸಾಲವನ್ನು ತ್ವರಿತವಾಗಿ ಪಡೆಯಬಹುದು. ಇಲ್ಲಿ ನಾನಾ ಹಂತಗಳ ಆದಾಯ ವರ್ಗದವರಿಗೂ ಸಾಲ ಸಿಗುತ್ತದೆ. ಆದರೆ ಎನ್‌ಬಿಎಫ್‌ಸಿಗಳಲ್ಲಿ ಸಾಲದ ಮೇಲಿನ ಬಡ್ಡಿ ಜಾಸ್ತಿ.

ಎನ್‌ಬಿಎಫ್‌ಸಿಯಲ್ಲಿ ಹೆಚ್ಚು ಬಡ್ಡಿ ಏಕೆ?:

ಎನ್‌ಬಿಎಫ್‌ಸಿಗಳು ಉಳಿತಾಯ ಖಾತೆ, ಚಾಲ್ತಿ ಖಾತೆ ಮೂಲಕ ಗ್ರಾಹಕರಿಂದ ಬಂಡವಾಳ ಸಂಗ್ರಹಿಸಲು ಸಾಧ್ಯವಿಲ್ಲದ ಕಾರಣದಿಂದ ಮಾರುಕಟ್ಟೆಯಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುತ್ತವೆ. ಕೆಲವೊಮ್ಮೆ ಬ್ಯಾಂಕ್‌ಗಳು ಸಾಲ ನಿರಾಕರಿಸಿದವರಿಗೆ ಎನ್‌ಬಿಎಫ್‌ಸಿಗಳು ಸಾಲ ಕೊಡುವುದೂ ಇದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರಿಗೆ, ಸ್ಥಿರ ಆದಾಯ ಇಲ್ಲದವರಿಗೆ, ನಾನಾ ಬಗೆಯ ವಾಣಿಜ್ಯ ವಹಿವಾಟುಗಳ ಹಿನ್ನೆಲೆಯವರಿಗೆ ಸಾಲ ನೀಡಲಾಗುತ್ತದೆ. ಎನ್‌ಬಿಎಫ್‌ಸಿಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ಆರ್‌ಬಿಐನ ರೆಪೊ ಅಥವಾ ಎಂಸಿಎಲ್‌ಆರ್ ದರಕ್ಕೆ ಅನುಗುಣವಾಗಿ ನಿಗದಿಪಡಿಸಬೇಕಿಲ್ಲ. ಹೀಗೆ ಅನೇಕ ರಿಸ್ಕ್ ತೆಗೆದುಕೊಂಡು ಸಾಲ ಕೊಡುವುದರಿಂದ ಎನ್‌ಬಿಎಫ್‌ಸಿಗಳು ಗ್ರಾಹಕರಿಂದ ಹೆಚ್ಚಿನ ಬಡ್ಡಿ ಪಡೆಯುತ್ತವೆ.

ಸರ್ಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳಲ್ಲಿ ಗೃಹ ಸಾಲದ ಬಡ್ಡಿ ದರ (ಆಗಸ್ಟ್ 2025)

(ಗಮನಿಸಿ – ಇದು ಅಂದಾಜು ಪಟ್ಟಿ ಮಾತ್ರ. ಸಾಲದ ಮೊತ್ತ, ನಿಮ್ಮ ಆದಾಯ, ಉದ್ಯೋಗ, ಕ್ರೆಡಿಟ್ ಅಂಕ ಆಧರಿಸಿ ಬಡ್ಡಿ ದರ ನಿಗದಿಯಾಗುತ್ತದೆ)

ಯಾವಾಗ ಬ್ಯಾಂಕ್‌‌ನಿಂದ ಗೃಹಸಾಲ ಪಡೆಯಬೇಕು?:

ನಿಮ್ಮ ಕ್ರೆಡಿಟ್ ಅಂಕ ಉತ್ತಮವಾಗಿದ್ದು ಸ್ಥಿರ ಆದಾಯವಿದ್ದರೆ ಬ್ಯಾಂಕ್‌ನಿಂದ ಗೃಹಸಾಲ ಪಡೆಯಿರಿ. ನೀವು ಖರೀದಿಸುತ್ತಿರುವ ಆಸ್ತಿಯ ದಾಖಲೆಗಳು ಸರಿಯಾಗಿ ಇದ್ದರೆ ಮಾತ್ರ ಪ್ರಮುಖ ಬ್ಯಾಂಕ್‌ಗಳು ಸಾಲ ಕೊಡುತ್ತವೆ ಎನ್ನುವುದು ನೆನಪಿನಲ್ಲಿರಲಿ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳಿಂದ ದೀರ್ಘಾವಧಿಗೆ ಸಾಲ ಪಡೆಯಲು ಸಾಧ್ಯವಾಗುವ ಜೊತೆಗೆ ಬಡ್ಡಿ ಕಡಿಮೆ ಇರುವುದರಿಂದ ಇಎಂಐ ಹೊರೆಯೂ ತಗ್ಗುತ್ತದೆ. ಮುಖ್ಯವಾಹಿನಿಯ ಬ್ಯಾಂಕ್‌ಗಳು ಹೆಚ್ಚು ಪಾರದರ್ಶಕವಾಗಿದ್ದು ಸಾಕಷ್ಟು ಅಳೆದು–ತೂಗಿ ಸಾಲ ಕೊಡುವುದರಿಂದ ನೀವು ಕೊಂಡಿರುವ ಆಸ್ತಿಯ ನೈಜತೆಯ ಬಗ್ಗೆ ಒಂದಿಷ್ಟು ಖಾತರಿ ಸಿಗುತ್ತದೆ.

ಯಾವಾಗ ಎನ್‌ಬಿಎಫ್‌ಸಿಯಿಂದ ಸಾಲ ಪಡೆಯಬೇಕು:

ಮುಖ್ಯವಾಹಿನಿಯ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಗೃಹಸಾಲ ಸಿಗದಿದ್ದಾಗ ಎನ್‌ಬಿಎಫ್‌ಸಿಗಳು ನಿಮ್ಮ ಆಯ್ಕೆಯಾಗಬೇಕು. ಏಕೆಂದರೆ ಇಲ್ಲಿ ಬಡ್ಡಿ ದರ ಜಾಸ್ತಿ ಇರುತ್ತದೆ. ನಿಮ್ಮ ಕ್ರೆಡಿಟ್ ಅಂಕ ಚೆನ್ನಾಗಿಲ್ಲದಿದ್ದರೆ, ನಿಮ್ಮ ಆದಾಯ ಸ್ಥಿರವಲ್ಲದಿದ್ದರೆ, ನಿಮ್ಮ ಆಸ್ತಿ ರೆವಿನ್ಯೂ ವ್ಯಾಪ್ತಿಯಲ್ಲಿ ಬರುತ್ತಿದ್ದರೆ ಎನ್‌ಬಿಎಫ್‌ಸಿಗಳಿಂದ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ.

ಉತ್ತಮ ಬಡ್ಡಿ ದರಕ್ಕೆ ಗೃಹ ಸಾಲ ಪಡೆಯುವುದು ಹೇಗೆ?: ಉತ್ತಮ ಬಡ್ಡಿ ದರಕ್ಕೆ ಗೃಹ ಸಾಲ ಸಿಗಬೇಕಾದರೆ ನಿಮ್ಮ ಕ್ರೆಡಿಟ್ ಅಂಕವು 750ಕ್ಕಿಂತ ಹೆಚ್ಚಿಗೆ ಇರಬೇಕು. ನಿಮಗೆ ಸ್ಥಿರವಾದ ಉದ್ಯೋಗ ಅಥವಾ ಬ್ಯುಸಿನೆಸ್ ಇದ್ದು ಮಾಸಿಕವಾಗಿ ನಿರ್ದಿಷ್ಟ ಆದಾಯವಿರಬೇಕು. ನೀವು ಕೊಳ್ಳುತ್ತಿರುವ ಆಸ್ತಿಯ ದಾಖಲೆಗಳು ಪಕ್ಕಾ ಇರಬೇಕು. ಭಾರತೀಯ ರಿಸರ್ವ್ ಬ್ಯಾಂಕ್‌ನ ಬಡ್ಡಿ ದರ ಏರಿಳಿತದ ಲಾಭ ಪಡೆಯಲು ರೆಪೊ ದರದ ಆಧಾರದಲ್ಲಿ ಗೃಹ ಸಾಲ ಪಡೆದುಕೊಳ್ಳಬೇಕು.

ಕಿವಿಮಾತು:
ಗೃಹಸಾಲ ಪಡೆಯುವಾಗ ಮುಖ್ಯವಾಹಿನಿಯ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ನಿಮ್ಮ ಆದ್ಯತೆಯಾಗಲಿ. ಅಲ್ಲಿ ಸಾಲ ಸಿಗದಿದ್ದರೆ ಮಾತ್ರ ಎನ್‌ಬಿಎಫ್‌ಸಿಗಳ ಮೊರೆ ಹೋಗಿ. ಪ್ರಮುಖ ಬ್ಯಾಂಕ್‌ಗಳಲ್ಲಿ ಸಾಲ ಸಿಗುವ ಅರ್ಹತೆ ಇದ್ದರೂ ನೀವು ಎನ್‌ಬಿಎಫ್‌ಸಿಗಳ ಬಳಿ ಸಾಲಕ್ಕಾಗಿ ಮೊರೆ ಹೋದರೆ ಹೆಚ್ಚಿನ ಬಡ್ಡಿ ಕಟ್ಟಬೇಕಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.