ADVERTISEMENT

ಬಂಡವಾಳ ಮಾರುಕಟ್ಟೆ: ಇಎಲ್ಎಸ್ಎಸ್ ಫಂಡ್ ಆಯ್ಕೆ ಹೇಗೆ?

ಅವಿನಾಶ್ ಕೆ.ಟಿ
Published 22 ಮೇ 2022, 19:31 IST
Last Updated 22 ಮೇ 2022, 19:31 IST
   

ಆದಾಯ ತೆರಿಗೆ ಉಳಿಸಲು ಹಣಕಾಸು ವರ್ಷದ ಕೊನೆಯಲ್ಲಿ ತರಾತುರಿಯಲ್ಲಿ ಯಾವುದಾದರೊಂದು ಇಎಲ್‌ಎಸ್ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ) ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎನ್ನುವ ಆಲೋಚನೆ ಅನೇಕರಲ್ಲಿ ಬರುವುದಿದೆ. ಆದರೆ ಹಣಕಾಸು ವರ್ಷದ ಆರಂಭದಲ್ಲೇ ಸರಿಯಾದ ಇಎಲ್ಎಸ್ಎಸ್ ಮ್ಯೂಚುಚಲ್ ಫಂಡ್ ಆಯ್ಕೆ ಮಾಡಿಕೊಂಡರೆ ಹೆಚ್ಚು ಲಾಭ ಗಳಿಸಲು ಸಾಧ್ಯ.

ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಅಂದರೆ ಏನು, ಇದರಲ್ಲಿ ಸಿಗುವ ಲಾಭವೇನು, ಒಳ್ಳೆಯ ಇಎಲ್ಎಸ್ಎಸ್ ಆಯ್ಕೆಗೆ ಮಾನದಂಡಗಳೇನು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ನಡೆಸೋಣ.

ಏನಿದು ಇಎಲ್ಎಸ್ಎಸ್?: ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಒಂದು ವೈವಿಧ್ಯಮಯ ಹೂಡಿಕೆ ಸಾಧನ. ಈ ಮ್ಯೂಚುವಲ್ ಫಂಡ್ ಯೋಜನೆಯು ಷೇರು ಮಾರುಕಟ್ಟೆಯಲ್ಲಿರುವ ದೊಡ್ಡ ಪ್ರಮಾಣದ (ಲಾರ್ಜ್ ಕ್ಯಾಪ್) ಕಂಪನಿಗಳು, ಮಧ್ಯಮ ಗಾತ್ರದ (ಮಿಡ್ ಕ್ಯಾಪ್) ಕಂಪನಿಗಳು, ಸಣ್ಣ ಪ್ರಮಾಣದ (ಸ್ಮಾಲ್ ಕ್ಯಾಪ್) ಕಂಪನಿಗಳು ಹೀಗೆ ಎಲ್ಲಿ ಹೆಚ್ಚು ಲಾಭದ ಸಾಧ್ಯತೆ ಇದೆಯೋ ಅಲ್ಲಿ ಹೂಡಿಕೆ ಮಾಡುತ್ತದೆ. ವಿಶೇಷ ಏನೆಂದರೆ ಈ ಫಂಡ್‌ನಲ್ಲಿ ₹ 1.5 ಲಕ್ಷದ ವರೆಗೆ ಹೂಡಿಕೆ ಮಾಡಿ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು.

ADVERTISEMENT

ಆದರೆ ಈ ಮ್ಯೂಚುವಲ್ ಫಂಡ್‌ನಲ್ಲಿ ಮೂರು ವರ್ಷಗಳ ಲಾಕಿನ್ ಅವಧಿ ಇರುತ್ತದೆ. ಅಂದರೆ ಹೂಡಿಕೆ ಮಾಡಿದ ಹಣವನ್ನು ಹೂಡಿಕೆ ಮಾಡಿದ ದಿನದಿಂದ ಮೂರು ವರ್ಷಗಳವರೆಗೆ ಹಿಂಪಡೆಯಲು (Withdrawal) ಸಾಧ್ಯವಿಲ್ಲ.

ಇಎಲ್ಎಸ್ಎಸ್ ಏಕೆ?: ಇಲ್ಲಿ ಏಕೆ ಹೂಡಿಕೆ ಮಾಡಬೇಕು ಎಂಬ ಪ್ರಶ್ನೆಗೆ ಹಲವು ಉತ್ತರಗಳಿವೆ.

1. ಶೇಕಡ 30ರ ಆದಾಯ ತೆರಿಗೆ ಮಿತಿಯಲ್ಲಿದ್ದು ಇಎಲ್ಎಸ್ಎಸ್‌ ಮ್ಯೂಚುವಲ್ ಫಂಡ್‌ನಲ್ಲಿ ₹ 1.5 ಲಕ್ಷದವರೆಗೆ ಹೂಡಿಕೆ ಮಾಡಿದರೆ ನಿಮಗೆ ₹ 46,800 ತೆರಿಗೆ ಉಳಿತಾಯವಾಗುತ್ತದೆ.

2. ದೊಡ್ಡ ಮೊತ್ತ ಇರುವವರು ಮಾತ್ರವೇ ಇದರಲ್ಲಿ ಹೂಡಿಕೆ ಮಾಡಬೇಕೆಂದಿಲ್ಲ. ₹ 500ರಿಂದಲೂ ಹೂಡಿಕೆ ಆರಂಭಿಸಲು ಸಾಧ್ಯ.

3. ಇಎಲ್ಎಸ್ಎಸ್‌ನಲ್ಲಿ ಐದು ವರ್ಷಗಳ ತೆರಿಗೆ ಉಳಿತಾಯದ ನಿಶ್ಚಿತ ಠೇವಣಿ (ಎಫ್‌.ಡಿ.), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ರಾಷ್ಟ್ರೀಯ ಉಳಿತಾಯ ಪತ್ರಕ್ಕಿಂತ (ಎನ್‌ಎಸ್‌ಸಿ) ಹೆಚ್ಚು ಲಾಭಾಂಶ ಗಳಿಸಲು ಅವಕಾಶವಿದೆ.

4. ಪಿಪಿಎಫ್‌ ಹೂಡಿಕೆಗೆ 15 ವರ್ಷಗಳ ಲಾಕಿನ್ ಅವಧಿ ಇದೆ. ತೆರಿಗೆ ಉಳಿತಾಯದ ನಿಶ್ಚಿತ ಠೇವಣಿಯ ಲಾಕಿನ್ ಅವಧಿ ಐದು ವರ್ಷ. ಆದರೆ ಇಎಲ್ಎಸ್ಎಸ್ ಲಾಕಿನ್ ಅವಧಿ ಮೂರು ವರ್ಷ ಮಾತ್ರ.

ಉತ್ತಮ ಇಎಲ್ಎಸ್ಎಸ್ ಆಯ್ಕೆ
1. ನಿರ್ದಿಷ್ಟ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಐತಿಹಾಸಿಕವಾಗಿ ಎಷ್ಟು ಲಾಭಾಂಶ ನೀಡಿದೆ ಎಂಬುದನ್ನು ಗಮನಿಸಬೇಕು.

2. ನಿರ್ದಿಷ್ಟ ಫಂಡ್ ಅಡಿಯಲ್ಲಿ ಎಷ್ಟು ದೊಡ್ಡ ಮೊತ್ತದ ಹಣ ಹೂಡಿಕೆಯಾಗಿದೆ ಎನ್ನುವುದನ್ನು ಗಮನಿಸಬೇಕು. ಹೆಚ್ಚುಮಂದಿ ಆ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದಾದರೆ ಅದು ಉತ್ತಮವಾಗಿದೆ ಎಂದು ಅಂದಾಜಿಸಿಕೊಳ್ಳಬಹುದು.

3. ನಿರ್ದಿಷ್ಟ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್‌ನ ನಿರ್ವಹಣಾ ಶುಲ್ಕ (ಎಕ್ಸ್‌ಪೆನ್ಸ್ ರೇಷಿಯೊ) ಎಷ್ಟಿದೆ ಎನ್ನುವುದನ್ನು ಅರಿಯಬೇಕು. ಕಡಿಮೆ ಶುಲ್ಕ ವಿಧಿಸುವ ಉತ್ತಮ ಇಎಲ್‌ಎಸ್ಎಸ್ ಮ್ಯೂಚುವಲ್ ಫಂಡ್ ಆಯ್ಕೆಗೆ ಸೂಕ್ತ.

4. ನಿರ್ದಿಷ್ಟ ಮ್ಯೂಚುವಲ್ ಫಂಡ್ ಯಾವ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ ಎನ್ನುವುದನ್ನು ನೋಡಿಕೊಳ್ಳಬೇಕು.

ಯಾವ ಫಂಡ್ ಉತ್ತಮ ಹುಡುಕೋದು ಎಲ್ಲಿ: ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಮಾಹಿತಿ ನೀಡುವ ವೆಬ್‌ಸೈಟ್‌ಗಳ ಮೂಲಕ ನೀವು ಉತ್ತಮ ಇಎಲ್ಎಸ್ಎಸ್ ಫಂಡ್ ಸುಲಭವಾಗಿ ಹುಡುಕಬಹುದು.

ಗೂಗಲ್ ಸರ್ಚ್‌ ಮೂಲಕ ಇಂತಹ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಲಾಗಿನ್ ಆಗಿರಿ. ಇಂತಹ ಬಹುತೇಕ ವೆಬ್‌ಸೈಟ್‌ಗಳಲ್ಲಿ ಮ್ಯೂಚುವಲ್ ಫಂಡ್‌ಗಳ ಪ್ರತ್ಯೇಕ ವಿಭಾಗವೊಂದು ಇರುತ್ತದೆ. ಅಲ್ಲಿ ಇಎಲ್ಎಸ್ಎಸ್ ಆಯ್ಕೆ ಮಾಡಿದರೆ, ದೊಡ್ಡ ಪಟ್ಟಿ ಬರುತ್ತದೆ. ಜನಪ್ರಿಯ ವೆಬ್‌ಸೈಟ್‌ಗಳು ಇಂತಹ ಫಂಡ್‌ಗಳಿಗೆ ವಿವಿಧ ಸಂಸ್ಥೆಗಳ ರೇಟಿಂಗ್‌ ವಿವರ ನೀಡಿರುತ್ತವೆ. ಅದರಲ್ಲಿ ನೀವು ಫೈವ್ ಸ್ಟಾರ್ ರೇಟಿಂಗ್ ಇರುವ ಫಂಡ್‌ಗಳನ್ನು ಆಯ್ಕೆಗೆ ಪರಿಗಣಿಸಬಹುದು.

ಗಳಿಕೆ ಕಂಡ ಸೂಚ್ಯಂಕಗಳು
ಸತತ ಐದು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಅನಿಶ್ಚಿತತೆಯ ನಡುವೆಯೂ ಗಳಿಕೆ ದಾಖಲಿಸಿವೆ. ಮೇ 20ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಗಳಿಕೆ ಕಂಡಿವೆ. 54,326 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್,ವಾರದ ಅವಧಿಯಲ್ಲಿ ಶೇ 2.90ರಷ್ಟು ಹೆಚ್ಚಳ ಕಂಡಿದೆ. 16,266 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ–50 ಶೇ 3.06ರಷ್ಟು ಜಿಗಿದಿದೆ. ಬ್ಯಾಂಕ್ ಆಫ್ ಚೀನಾ 5 ವರ್ಷಗಳ ಸಾಲದ ಮೇಲಿನ ಬಡ್ಡಿ ದರವನ್ನು 15 ಮೂಲಾಂಶಗಳಷ್ಟು ಕಡಿತಗೊಳಿಸಿದ ಬಳಿಕ ವಾರಾಂತ್ಯದಲ್ಲಿ ಏಷ್ಯಾ ಮಾರುಕಟ್ಟೆಗಳಲ್ಲಿ ಸಕಾರಾತ್ಮಕತೆ ಕಂಡುಬಂತು.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಲೋಹ ವಲಯ ಶೇ 7.3ರಷ್ಟು ಜಿಗಿದಿದೆ.ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 5.3ರಷ್ಟು ಹೆಚ್ಚಳ ಕಂಡಿದೆ. ಎಫ್ಎಂಸಿಜಿ, ಆಟೊ, ರಿಯಲ್ ಎಸ್ಟೇಟ್ ಸೂಚ್ಯಂಕಗಳು ಶೇ 4-5ರಷ್ಟು ಸುಧಾರಿಸಿವೆ. ಆದರೆ ಐ.ಟಿ. ಸೂಚ್ಯಂಕ ಶೇ 2ರಷ್ಟು ಕುಸಿದಿದೆ.

ಏರಿಕೆ–ಇಳಿಕೆ: ಈ ವಾರ ಐಷರ್ ಶೇ 11.3ರಷ್ಟು, ಹಿಂಡಾಲ್ಕೊ ಶೇ 10.59ರಷ್ಟು, ಕೋಲ್ ಇಂಡಿಯಾ ಶೇ 10.23ರಷ್ಟು, ಎಚ್ಎಎಲ್ ಶೇ 16.38ರಷ್ಟು, ಬಿಎಚ್ಇಎಲ್ ಶೇ 14.69ರಷ್ಟು, ಗ್ರಾನ್ಯುಯೆಲ್ಸ್ ಇಂಡಿಯಾ ಶೇ 13.43ರಷ್ಟು, ಎಲ್ಐಸಿ ಹೌಸಿಂಗ್ ಫೈನಾನ್ಸ್ ಶೇ 11.82ರಷ್ಟು, ಬಾಲಕೃಷ್ಣ ಇಂಡಸ್ಟ್ರೀಸ್ ಶೇ 11.92ರಷ್ಟು ಜಿಗಿದಿವೆ. ಡಾ. ಲಾಲ್ ಪತ್ ಲ್ಯಾಬ್ಸ್ ಶೇ 14.09ರಷ್ಟು, ಮೆಟ್ರೊಪಾಲಿಸ್ ಹೆಲ್ತ್ ಶೇ 13.59ರಷ್ಟು, ಲುಪಿನ್ ಶೇ 8.32ರಷ್ಟು, ಹನಿವೆಲ್ ಶೇ 8.33ರಷ್ಟು, ಮಣಪ್ಪುರಂ ಫೈನಾನ್ಸ್ ಶೇ 5.65ರಷ್ಟು ಕುಸಿದಿವೆ.

ಮುನ್ನೋಟ: ಷೇರುಪೇಟೆಯಲ್ಲಿ ಅನಿಶ್ಚಿತೆಯ ಓಟ ಇನ್ನೂ ಕೆಲವು ವಾರ ಮುಂದುವರಿಯುವ ಸಾಧ್ಯತೆ ಇದೆ. ಜಾಗತಿಕವಾಗಿ ಪ್ರಮುಖ ದೇಶಗಳು ಬೆಲೆ ಏರಿಕೆ, ಬ್ಯಾಂಕ್‌ ಬಡ್ಡಿ ದರ ಹೆಚ್ಚಳ, ಭವಿಷ್ಯದ ಬೆಳವಣಿಗೆ ಮುನ್ನೋಟದ ಬಗ್ಗೆ ಅಸ್ಪಷ್ಟತೆ ಸೇರಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಸದ್ಯದ ಸ್ಥಿತಿಯಲ್ಲಿ ತ್ವರಿತ ಮತ್ತು ಹರಿತವಾದ ಏರಿಳಿತಗಳನ್ನು ನಿರೀಕ್ಷಿಸಬಹುದು.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.