Mutual Fund: ಹೂಡಿಕೆಗೆ ಎಷ್ಟು ಫಂಡ್ ಬೇಕು?
‘ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಬೇಕು, ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದು’. ಇದು ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳಿರುವ ಮಾತು. ಹೂಡಿಕೆಯ ವಿಷಯ ಬಂದಾಗ ಪೋರ್ಟ್‌ಫೋಲಿಯೋದಲ್ಲಿ ವೈವಿಧ್ಯತೆ ಬಹಳ ಮುಖ್ಯವಾದ ಅಂಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅತಿಯಾದ ವೈವಿಧ್ಯತೆ ಅಪಾಯಕಾರಿ ಎನ್ನುವ ಸತ್ಯ ನಮಗೆ ಗೊತ್ತಿರಬೇಕು. ಬೇರೆ ಬೇರೆ ಮಾದರಿಯ ಮ್ಯೂಚುವಲ್ ಫಂಡ್‌ಗಳಲ್ಲಿ (ಎಂ.ಎಫ್) ನಾವು ತೊಡಗಿಸಬೇಕು ಎಂಬ ಲೆಕ್ಕಾಚಾರ ಇಟ್ಟುಕೊಂಡು ಅಳತೆ ಅಂದಾಜಿಲ್ಲದೆ ಹೆಚ್ಚೆಚ್ಚು ಫಂಡ್‌ಗಳ ಮೇಲೆ ತೊಡಗಿಸಿದಾಗ ಗೊಂದಲ ಉಂಟಾಗುತ್ತದೆ. ಅಷ್ಟೇ ಅಲ್ಲ, ಹೂಡಿಕೆಗಳ ಸರಿಯಾದ ನಿರ್ವಹಣೆ ಸಾಧ್ಯವಾಗದೆ ಗಳಿಕೆಯ ಪ್ರಮಾಣ ತಗ್ಗುವ ಸಾಧ್ಯತೆಯೂ ಇರುತ್ತದೆ. ಹಾಗಾದರೆ ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ಮ್ಯೂಚುವಲ್ ಫಂಡ್‌ಗಳ ಸರಿಯಾದ ಮಿಶ್ರಣ
ಕಾಯ್ದುಕೊಳ್ಳೋದು ಹೇಗೆ? ಬನ್ನಿ ತಿಳಿಯೋಣ.
ನೀವು ಎಷ್ಟು ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡಬೇಕು?: ಯಾವುದೇ ಮ್ಯೂಚುವಲ್ ಫಂಡ್ ಹೂಡಿಕೆದಾರನಿಗೆ ಎಷ್ಟು ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಸರಳ ಉತ್ತರ ಒಂದು ಮ್ಯೂಚುವಲ್ ಫಂಡ್ ಸಾಲುವುದಿಲ್ಲ ಒಂದಕ್ಕಿಂತ ಹೆಚ್ಚಿನ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವುದು. ಹೌದು, ಸಾಮಾನ್ಯವಾಗಿ ಪ್ರತಿಯೊಂದು ಮ್ಯೂಚುವಲ್ ಫಂಡ್ ಹೂಡಿಕೆಯೂ ಕೂಡ ವೈವಿಧ್ಯತೆಯಿಂದ ಕೂಡಿರುತ್ತದೆ. ಉದಾಹರಣೆಗೆ ಒಂದು ಮ್ಯೂಚುವಲ್ ಫಂಡ್ ಮೇಲೆ ನೀವು ಹಣ ತೊಡಗಿಸಿದರೆ ಆ ಮೊತ್ತ ಅಂದಾಜು 50ರಿಂದ 100 ಕಂಪನಿಗಳ ಮೇಲೆ ಹೂಡಿಕೆಯಾಗುತ್ತದೆ. ಹೀಗಿದ್ದರೂ ಸಹಿತ ಒಂದೇ ಮ್ಯೂಚುವಲ್ ಫಂಡ್ ನೆಚ್ಚಿಕೊಂಡು ಹೂಡಿಕೆ ಮಾಡಬಾರದು. ಒಂದೇ ಮ್ಯೂಚುವಲ್ ಫಂಡ್ ಮೇಲೆ ಭರವಸೆ ಇಡುವುದೆಂದರೆ ಒಬ್ಬ ಮ್ಯೂಚುವಲ್ ಫಂಡ್ ಮ್ಯಾನೇಜರ್‌ನ ಹಣಕಾಸು ನಿರ್ವಹಣೆ ಶೈಲಿಯ ಮೇಲೆ ಅತಿಯಾದ ವಿಶ್ವಾಸ ಇಟ್ಟಂತೆ. ಫಂಡ್ ಮ್ಯಾನೇಜರ್ ತೆಗೆದುಕೊಳ್ಳುವ ಹೂಡಿಕೆ ನಿರ್ಧಾರಗಳು ಕೂಡ ತಪ್ಪಾಗಬಹುದು ಎಂಬ ಲೆಕ್ಕಾಚಾರ ಇಲ್ಲಿ ನಮಗಿರಬೇಕು.
ಎಷ್ಟು ಮ್ಯೂಚುವಲ್ ಫಂಡ್‌ಗಳು ಸಾಕು?: ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ಸಾಕಷ್ಟು ಫಂಡ್‌ಗಳಿವೆ ಎಂದಾಕ್ಷಣ ನೀವು ಹೂಡಿಕೆಯಲ್ಲಿ ವೈವಿಧ್ಯತೆ ಸಾಧಿಸಿದ್ದೀರಿ ಎಂದಲ್ಲ. ಒಂದು ಪೋರ್ಟ್‌ಫೋಲಿಯೋದಲ್ಲಿ ಹತ್ತರಿಂದ ಹದಿನೈದು ಫಂಡ್‌ಗಳಿದ್ದು ಒಂದಕ್ಕೊಂದು ಫಂಡ್‌ನ ಮಾದರಿ ಹೋಲಿಕೆಯಾಗುತ್ತಿದ್ದರೆ ಅಲ್ಲಿ ಹೂಡಿಕೆ ವೈವಿಧ್ಯತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಅಸಲಿಗೆ ಒಂದು ಪೋರ್ಟ್‌ಫೋಲಿಯೋಗೆ 4 ಫಂಡ್‌ಗಳು ಸಾಕು ಎನ್ನುವುದು ತಜ್ಞರ ಅಭಿಮತ. ಅದಕ್ಕಿಂತ ಹೆಚ್ಚು ಫಂಡ್‌ಗಳ ಮೇಲೆ ನೀವು ಹೂಡಿಕೆ ಮಾಡಿದ್ದರೆ ಹೂಡಿಕೆಯ ನಕಲಾಗುತ್ತಿರುತ್ತದೆ. ವಿವಿಧ ಮ್ಯೂಚುವಲ್ ಫಂಡ್‌ಗಳು ಷೇರು ಮಾರುಕಟ್ಟೆಯಲ್ಲಿರುವ ಒಂದಷ್ಟು ಪ್ರಮುಖ ಕಂಪನಿಗಳ ಮೇಲೆಯೇ ಹೂಡಿಕೆ ಮಾಡುತ್ತಿರುತ್ತವೆ. ವಾಸ್ತವಿಕ ಲೆಕ್ಕಾಚಾರ ಹೀಗಿರುವಾಗ ನಾಲ್ಕಕ್ಕಿಂತ ಹೆಚ್ಚಿನ ಫಂಡ್‌ಗಳಲ್ಲಿ ತೊಡಗಿಸುವುದರಲ್ಲಿ
ಯಾವುದೇ ಹೆಚ್ಚುಗಾರಿಕೆ ಇಲ್ಲ.
ವಿವಿಧ ವಲಯಗಳ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಬೇಕೇ, ಬೇಡವೇ?: ವಾಸ್ತವದಲ್ಲಿ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ವಿವಿಧ ಮಾದರಿಗಳನ್ನು ಪರಿಗಣಿಸಬೇಕು. ವಿವಿಧ ವಲಯಗಳ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡಾಗ ವೈವಿಧ್ಯತೆ ಸಾಧ್ಯವಾಗುವ ಜೊತಗೆ ಮಾರುಕಟ್ಟೆಯ ಏರಿಳಿತದ ರಿಸ್ಕ್ ಅನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ನಾನಾ ಮಾದರಿಯ ಕಂಪನಿಗಳು ಬೇರೆ ಬೇರೆ ಸಂದರ್ಭದಲ್ಲಿ ಸಕಾರಾತ್ಮಕ ಮತ್ತು ಸಕಾರಾತ್ಮಕವಾಗಿ ವರ್ತಿಸುವುದರಿಂದ ನಿಮ್ಮ ಪೋರ್ಟ್‌ಫೋಲಿಯೋ ಸುರಕ್ಷತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಯಾವೆಲ್ಲಾ ಫಂಡ್‌ಗಳನ್ನು ಪರಿಗಣಿಸಬೇಕು? ಬನ್ನಿ ತಿಳಿಯೋಣ.
ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್: ಇಎಲ್ಎಸ್ಎಸ್ ಫಂಡ್ ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ ಅಂತ. ಈ ಫಂಡ್ ಅನ್ನು ಟ್ಯಾಕ್ಸ್ ಸೇವರ್ ಫಂಡ್ ಅಂತಲೂ ಕರೆಯುತ್ತಾರೆ. ಇಎಲ್ಎಸ್ಎಸ್ ಫಂಡ್‌ಗಳಲ್ಲಿ ಹಾಕಿದ ಶೇ 80ರಷ್ಟು ದುಡ್ಡನ್ನು ಷೇರು ಮಾರುಕಟ್ಟೆ ಮತ್ತು ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲಿ ತೊಡಗಿಸಲಾಗುತ್ತದೆ. ಮೂರು ವರ್ಷಗಳ ಲಾಕಿನ್ ಅವಧಿ ಇರುವ ಈ ಫಂಡ್‌ನಲ್ಲಿ ಹೂಡಿದರೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ವಾರ್ಷಿಕ ₹1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಸಣ್ಣ ಮೊತ್ತ (ಎಸ್ಐಪಿ) ಅಥವಾ ದೊಡ್ಡ ಮೊತ್ತ ಹೂಡಿಕೆಗೆ ಅವಕಾಶವಿದೆ. ದೊಡ್ಡ ಗಾತ್ರ (ಲಾರ್ಜ್ ಕ್ಯಾಪ್), ಮಧ್ಯಮ ಗಾತ್ರ (ಮಿಡ್ ಕ್ಯಾಪ್) ಮತ್ತು ಸಣ್ಣ ಗಾತ್ರದ (ಸ್ಮಾಲ್ ಕ್ಯಾಪ್) ಕಂಪನಿಗಳ ಮೇಲೆ ಹೂಡಿಕೆ ಮಾಡಲು ಇಎಲ್ಎಸ್ಎಸ್ ಫಂಡ್‌ಗಳಲ್ಲಿ ಅವಕಾಶವಿರುವ ಕಾರಣ ಹೂಡಿಕೆ ವೈವಿಧ್ಯತೆ ಕಾಯ್ದುಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ. ಮ್ಯೂಚುವಲ್ ಫಂಡ್‌ಗೆ ಈಗಷ್ಟೇ ಪ್ರವೇಶ ಮಾಡುತ್ತಿದ್ದೇವೆ, ಹೆಚ್ಚು ರಿಸ್ಕ್ ಇರಬಾರದು, ತೆರಿಗೆಯೂ ಉಳಿಯಬೇಕು ಎನ್ನುವವರಿಗೆ ಇದು ಸೂಕ್ತ.
ಅಗ್ರೆಸಿವ್ ಹೈಬ್ರೀಡ್ ಮ್ಯೂಚುವಲ್ ಫಂಡ್: ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳು ಮತ್ತು ಡೆಟ್ (ಬಾಂಡ್ ಮಾದರಿಯ ಸುರಕ್ಷಿತ ಹೂಡಿಕೆ) ಹೂಡಿಕೆಗಳ ಮಿಶ್ರಣ ಹೊಂದಿರುವ ಫಂಡ್‌ಗಳನ್ನು ಅಗ್ರೆಸಿವ್ ಹೈಬ್ರೀಡ್ ಫಂಡ್ ಎನ್ನಲಾಗುತ್ತದೆ. ಅಗ್ರೆಸಿವ್ ಹೈಬ್ರೀಡ್ ಮ್ಯೂಚುವಲ್ ಫಂಡ್‌ಗಳನ್ನು ಈ ಮೊದಲು ಬ್ಯಾಲೆನ್ಸ್ಡ್ ಫಂಡ್ ಎಂದು ಕರೆಯಲಾಗುತ್ತಿತ್ತು. ಈ ಫಂಡ್‌ನಲ್ಲಿ ಹೂಡಿಕೆದಾರರ ಶೇ 20ರಿಂದ ಶೇ 35ರಷ್ಟು ಮೊತ್ತವನ್ನು ಡೆಟ್ ಹೂಡಿಕೆಗಳಲ್ಲಿ ತೊಡಗಿಸಲು ಅವಕಾಶವಿದ್ದು ಶೇ 65ರಿಂದ ಶೇ 80ರಷ್ಟು ಮೊತ್ತವನ್ನು ಷೇರು ಮಾರುಕಟ್ಟೆ ಆಧಾರಿತ ಉತ್ಪನ್ನಗಳಲ್ಲಿ ತೊಡಗಿಸಲು ಅವಕಾಶವಿರುತ್ತದೆ. ಇಲ್ಲಿ ಸುರಕ್ಷಿತ ಮತ್ತು ಮಾರುಕಟ್ಟೆ ಆಧಾರಿತ ಹೂಡಿಕೆಯ ಮಿಶ್ರಣವಿರುವ ಕಾರಣ ವೈವಿಧ್ಯತೆ ಸಾಧ್ಯವಾಗುವ ಜೊತೆಗೆ ರಿಸ್ಕ್ ಕೂಡ ಕೊಂಚ ಕಡಿಮೆ ಅನ್ನಬಹುದು. ಮೂರರಿಂದ ಐದು ವರ್ಷ ಹೂಡಿಕೆ ಮಾಡುತ್ತೇವೆ ಎನ್ನುವವರಿಗೆ ಇದು ಸರಿ ಹೊಂದುತ್ತದೆ.
ಲಾರ್ಜ್ ಮತ್ತು ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು: ಷೇರು ಮಾರುಕಟ್ಟೆಯಲ್ಲಿರುವ ಅಗ್ರಮಾನ್ಯ 250 ಕಂಪನಿಗಳ ಮೇಲೆ ಲಾರ್ಜ್ ಆ್ಯಂಡ್ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿಯ) ನಿಯಮದ ಪ್ರಕಾರ ಈ ಮಾದರಿಯ ಮ್ಯೂಚುವಲ್ ಫಂಡ್‌ಗಳು ಕನಿಷ್ಠ ಶೇ 35ರಷ್ಟು ಹಣವನ್ನು ಲಾರ್ಜ್‌ಕ್ಯಾಪ್ ಕಂಪನಿಗಳ ಮೇಲೆ ಮತ್ತು ಶೇ 35ರಷ್ಟು ಮೊತ್ತವನ್ನು ಮಿಡ್ ಕ್ಯಾಪ್ ಕಂಪನಿಗಳ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ. ಈ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಲಾರ್ಡ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಕಂಪನಿಗಳ ಮೇಲೆ ಹೂಡಿಕೆ ಸಾಧ್ಯವಾಗುತ್ತದೆ. ಲಾರ್ಜ್‌ಕ್ಯಾಪ್ ಫಂಡ್‌ಗಳು ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭದಲ್ಲಿ ಸ್ಥಿರತೆ ತಂದುಕೊಟ್ಟರೆ, ಮಿಡ್ ಕ್ಯಾಪ್ ಫಂಡ್‌ಗಳು ದೀರ್ಘಾವಧಿಯಲ್ಲಿ ಉತ್ತಮ ಬೆಳವಣಿಗೆ ತಂದುಕೊಡುತ್ತವೆ. 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಲು ಈ ಫಂಡ್ ಸೂಕ್ತ.
ಷೇರು ಮಾರುಕಟ್ಟೆಯಲ್ಲಿರುವ ಎಲ್ಲಾ ವಲಯಗಳ ಎಲ್ಲಾ ಗಾತ್ರದ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳನ್ನು ಮಲ್ಟಿಕ್ಯಾಪ್ ಮ್ಯೂಚುವಲ್ ಫಂಡ್ ಎಂದು ಕರೆಯಲಾಗುತ್ತದೆ. ಹೂಡಿಕೆ ವೈವಿಧ್ಯತೆ ಸಾಧಿಸಲು ಈ ಫಂಡ್ ಒಂದು ಉತ್ತಮ ಆಯ್ಕೆ. ಸೆಬಿ ನಿಯಮದ ಪ್ರಕಾರ ಈ ಫಂಡ್‌ನಲ್ಲಿ ಶೇ 25ರಷ್ಟು ಮೊತ್ತವನ್ನು ಲಾರ್ಜ್ ಕ್ಯಾಪ್ ಶೇ 25ರಷ್ಟು ಮೊತ್ತವನ್ನು ಮಿಡ್ ಕ್ಯಾಪ್ ಮತ್ತು ಶೇ 25ರಷ್ಟು ಮೊತ್ತವನ್ನು ಸ್ಮಾಲ್ ಕ್ಯಾಪ್ ಕಂಪನಿಗಳ ಮೇಲೆ ತೊಡಗಿಸಬೇಕಾಗುತ್ತದೆ. ಮಾರುಕಟ್ಟೆಯ ಪರಿಸ್ಥಿತಿ ಆಧರಿಸಿ ಹೂಡಿಕೆ ಸೂತ್ರವನ್ನು ಬದಲಿಸುವ ಅವಕಾಶ ಫಂಡ್ ಮ್ಯಾನೇಜರ್‌ಗೆ ಇರುತ್ತದೆ. 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಬೇಕು ಎನ್ನುವವರಿಗೆ ಈ ಫಂಡ್‌ಗಳು ಸರಿಹೊಂದುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.