ಪ್ರತಿ ತಿಂಗಳು ₹10 ಸಾವಿರ ಹೂಡಿಕೆ ಮಾಡಿ ₹1 ಕೋಟಿ ಒಗ್ಗೂಡಿಸಲು ಸಾಧ್ಯವೇ? ಈ ಪ್ರಶ್ನೆ ಪ್ರತಿ ಹೂಡಿಕೆದಾರರನ್ನೂ ಒಂದಲ್ಲ ಒಂದು ಹಂತದಲ್ಲಿ ಕಾಡಿರುತ್ತದೆ. ಹೂಡಿಕೆ ಮಾಡಿ ದೊಡ್ಡ ಮೊತ್ತ ಒಗ್ಗೂಡಿಸಲು ಮ್ಯೂಚುವಲ್ ಫಂಡ್ ಎಸ್ಐಪಿ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಚಿನ್ನದ ಮೇಲಿನ ಹೂಡಿಕೆಗಳನ್ನು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಒಂದೊಂದು ಹೂಡಿಕೆಯೂ ಒಂದೊಂದು ಬಗೆಯ ರಿಸ್ಕ್‌ನಿಂದ ಕೂಡಿರುತ್ತದೆ. ವಿವಿಧ ಹೂಡಿಕೆಗಳಲ್ಲಿರುವ ಅನುಕೂಲ–ಅನನುಕೂಲಗಳೇನು?
ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು:
ಮ್ಯೂಚುವಲ್ ಫಂಡ್ ಎಸ್ಐಪಿ ಅಂದರೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ತೊಡಗಿಸುವ ವ್ಯವಸ್ಥಿತ ಯೋಜನೆ. ಇದರ ಮೂಲಕ ದೀರ್ಘಾವಧಿಯಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಅನಿಶ್ಚಿತತೆಯಿಂದ ಕೂಡಿರುತ್ತವೆ. ಆದರೆ ದೀರ್ಘಾವಧಿಯಲ್ಲಿ ವಾರ್ಷಿಕ ಶೇ 12ರಿಂದ ಶೇ 14ರವರೆಗೆ ಗಳಿಕೆ ನಿರೀಕ್ಷಿಸಬಹುದು.
ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳು ₹10 ಸಾವಿರ ಹೂಡಿಕೆ ಮಾಡಿ ವಾರ್ಷಿಕ ನಿಮಗೆ ಶೇ 12ರಷ್ಟು ಗಳಿಕೆ ಸಿಕ್ಕರೆ ₹1 ಕೋಟಿ ಒಗ್ಗೂಡಿಸಲು 20ರಿಂದ 21 ವರ್ಷ ಬೇಕಾಗುತ್ತವೆ. ಒಂದೊಮ್ಮೆ ಹೂಡಿಕೆ ಮೇಲೆ ವಾರ್ಷಿಕ ಶೇ 14ರಷ್ಟು ಲಾಭ ಸಿಕ್ಕರೆ 18ರಿಂದ 19 ವರ್ಷಗಳಲ್ಲಿ ₹1 ಕೋಟಿ ನಿಮ್ಮದಾಗುತ್ತದೆ.
ಗಳಿಕೆ ಖಾತರಿ: ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ನಿಶ್ಚಿತ ಗಳಿಕೆಯ ಖಾತರಿ ಇಲ್ಲ. ಗಳಿಕೆಯು ಮಾರುಕಟ್ಟೆಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ರಿಸ್ಕ್ ಪ್ರಮಾಣ: ಮ್ಯೂಚುವಲ್ ಫಂಡ್‌ಗಳಲ್ಲಿ ಅಲ್ಪಾವಧಿಯಲ್ಲಿ ರಿಸ್ಕ್ ಹೆಚ್ಚಿರುತ್ತದೆ. ಆದರೆ, ದೀರ್ಘಾವಧಿಯಲ್ಲಿ ರಿಸ್ಕ್ ಕಡಿಮೆಯಾಗುತ್ತೆ.
ತೆರಿಗೆ ಲೆಕ್ಕಾಚಾರ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಒಂದು ವರ್ಷದ ಒಳಗೆ ನಗದೀಕರಣ ಮಾಡಿಕೊಂಡರೆ ಶೇ 20ರಷ್ಟು ಅಲ್ಪಾವಧಿ ಬಂಡವಾಳ ತೆರಿಗೆ (ಎಸ್‌ಟಿಸಿಜಿ) ಅನ್ವಯಿಸುತ್ತದೆ. ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ಅದನ್ನು ಹಿಂಪಡೆದು ₹1.25 ಲಕ್ಷಕ್ಕಿಂತ ಹೆಚ್ಚಿನ ಗಳಿಕೆ ಇದ್ದರೆ ಶೇ 12.5ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿ:
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆ. ನಿಶ್ಚಿತ ಆದಾಯ ಗಳಿಸಬೇಕು, ಯಾವುದೇ ರಿಸ್ಕ್ ಇರಬಾರದು ಎನ್ನುವವರಿಗೆ ಇದು ಹೇಳಿ ಮಾಡಿಸಿದ ಯೋಜನೆ. ಪಿಪಿಎಫ್ ಹೂಡಿಕೆಯನ್ನು ಅಂಚೆ ಕಚೇರಿ ಮತ್ತು ಆಯ್ದ ಬ್ಯಾಂಕ್‌ಗಳ ಮೂಲಕ ಆರಂಭಿಸಬಹುದು. ಪ್ರಸ್ತುತ ಪಿಪಿಎಫ್ ಬಡ್ಡಿ ದರ ಶೇ 7.1ರಷ್ಟಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಬಡ್ಡಿ ದರ ಪರಿಷ್ಕರಿಸುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ₹10 ಸಾವಿರ ಹೂಡಿಕೆ ಮಾಡಿದರೆ ಪ್ರಸ್ತುತ ಬಡ್ಡಿ ದರದ ಲೆಕ್ಕಾಚಾರದಲ್ಲಿ ₹1 ಕೋಟಿ ಒಗ್ಗೂಡಿಸಲು 28 ವರ್ಷಗಳು ಬೇಕಾಗುತ್ತವೆ. ಪಿಪಿಎಫ್‌ನ ಹೂಡಿಕೆ ಅವಧಿ ವಾಸ್ತವದಲ್ಲಿ 15 ವರ್ಷಗಳು. ಆದರೆ 15 ವರ್ಷಗಳ ನಂತರ ಹೂಡಿಕೆಯನ್ನು ಐದೈದು ವರ್ಷಗಳಿಗೆ ವಿಸ್ತರಿಸುತ್ತಾ ಹೂಡಿಕೆ ಮುಂದುವರಿಸಬಹುದು.
ಗಳಿಕೆ ಖಾತರಿ: ಪಿಪಿಎಫ್‌ನಲ್ಲಿ ಖಾತರಿಯ ಗಳಿಕೆ ಸಿಗುತ್ತದೆ. ಆದರೆ ಗಳಿಕೆ ಪ್ರಮಾಣ ಈಕ್ವಿಟಿ ಮ್ಯೂಚುವಲ್ ಫಂಡ್‌ಗೆ ಹೋಲಿಸಿದರೆ ಕಡಿಮೆ.
ರಿಸ್ಕ್: ಪಿಪಿಎಫ್‌ನಲ್ಲಿ ಹೂಡಿಕೆ ರಿಸ್ಕ್ ತೀರಾ ಕಡಿಮೆ. ಹೆಚ್ಚು ರಿಸ್ಕ್ ಇರಬಾರದು ಎನ್ನುವವರಿಗೆ ಇದು ಹೇಳಿ ಮಾಡಿಸಿದ ಯೋಜನೆ. ಹೂಡಿಕೆಗೆ ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದು ಸಕಾರಾತ್ಮಕ ಅಂಶ.
ತೆರಿಗೆ: ಪಿಪಿಎಫ್‌ನಲ್ಲಿನ ಹೂಡಿಕೆಗೆ ಹಳೆಯ ತೆರಿಗೆ ಪದ್ಧತಿ ಪ್ರಕಾರ ಸೆಕ್ಷನ್ ಸಿ ಅಡಿಯಲ್ಲಿ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದಲ್ಲದೆ ಪಿಪಿಎಫ್‌ನ ಮೇಲಿನ ಬಡ್ಡಿ ಗಳಿಕೆ ಮತ್ತು ಮೆಚ್ಯೂರಿಟಿ ಮೊತ್ತದ ಮೇಲೆ ಯಾವುದೇ ತೆರಿಗೆ ಬರುವುದಿಲ್ಲ.
ಚಿನ್ನದ ಇಟಿಎಫ್:
ಷೇರು ಮಾರುಕಟ್ಟೆಯಲ್ಲಿ ಹೇಗೆ ಷೇರುಗಳನ್ನು ಖರೀದಿಸಿ ಮತ್ತೆ ಮಾರಾಟ ಮಾಡಬಹುದೋ ಅದೇ ರೀತಿ ಚಿನ್ನದ ಇಟಿಎಫ್‌ಗಳನ್ನು (ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್) ಷೇರು ಮಾರುಕಟ್ಟೆಯಲ್ಲಿ ಟ್ರೇಡ್ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗಿರುವ ಇಟಿಎಫ್‌ಗಳ ಮೂಲಕ ನೀವು ಚಿನ್ನದ ಮೇಲೆ ಹಣ ತೊಡಗಿಸಬಹುದು. ಬಂಗಾರದ ಬೆಲೆ ಹೆಚ್ಚಾದಂತೆ ಚಿನ್ನದ ಇಟಿಎಫ್ ಮೌಲ್ಯ ಹೆಚ್ಚಾಗುತ್ತದೆ ಮತ್ತು ಅದರ ಬೆಲೆ ಇಳಿಕೆಯಾದಂತೆ ಇಟಿಎಫ್ ಮೌಲ್ಯವೂ ಕುಸಿಯುತ್ತದೆ. ನಿಮಗೆ ಬೇಕಾದಾಗ ಖರೀದಿ, ಮಾರಾಟ ಸಾಧ್ಯವಿರುವುದರಿಂದ ಈ ಇಟಿಎಫ್‌ಗಳಲ್ಲಿ ನಗದೀಕರಣ ಸುಲಭ.
ಚಿನ್ನದ ಇಟಿಎಫ್‌ಗಳು ಹೂಡಿಕೆದಾರರ ಮೊತ್ತಕ್ಕೆ ಪ್ರತಿಯಾಗಿ ಘನರೂಪದ ಚಿನ್ನ ಖರೀದಿಸುತ್ತವೆ. ಸದ್ಯ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದೇ ರೀತಿ ಚಿನ್ನದ ಬೆಲೆ ಏರಿಕೆಯಾಗುತ್ತಾ ಸಾಗಿದರೆ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿ ಎಲ್ಲಕ್ಕಿಂತಲೂ ವೇಗವಾಗಿ ₹1 ಕೋಟಿ ಗಳಿಸಲು ಸಾಧ್ಯವಾಗಬಹುದು. 2025ರ ದತ್ತಾಂಶದ ಪ್ರಕಾರ ಉತ್ತಮ ಗಳಿಕೆ ತಂದುಕೊಟ್ಟಿರುವ 10 ಅಗ್ರ ಇಟಿಎಫ್‌ಗಳ ಒಂದು ದಶಕದ ಗಳಿಕೆ ನೋಡಿದಾಗ ಅವು ಶೇ 13.46ರವರೆಗೆ ವಾರ್ಷಿಕ ಲಾಭ ಕೊಟ್ಟಿರುವುದು ಕಂಡುಬರುತ್ತದೆ. ಈ ಲೆಕ್ಕಾಚಾರದಲ್ಲಿ ಪ್ರತಿ ತಿಂಗಳು ₹10 ಸಾವಿರ ಚಿನ್ನದ ಇಟಿಎಫ್‌ಗೆ ಹೂಡಿಕೆ ಮಾಡಿದರೆ 14 ವರ್ಷಗಳಲ್ಲಿ ₹1 ಕೋಟಿ ಒಗ್ಗೂಡಿಸಲು ಸಾಧ್ಯ. ಆದರೆ ಚಿನ್ನದ ಬೆಲೆ ಸದಾ ಏರಿಕೆ ಕಾಣುವುದಿಲ್ಲ, ಕೆಲ ವರ್ಷಗಳ ಕಾಲ ಚಿನ್ನದ ಬೆಲೆ ನಿಂತಲ್ಲೇ ನಿಂತಿರುತ್ತದೆ ಎನ್ನುವ ಅಂಶವನ್ನು ಇಲ್ಲಿ ಗಮನಿಸಬೇಕು.
ಗಳಿಕೆ: ಹಲವು ದಶಕಗಳ ದತ್ತಾಂಶ ನೋಡಿದಾಗ ಚಿನ್ನದ ಮೇಲಿನ ಹೂಡಿಕೆ ಷೇರು ಮಾರುಕಟ್ಟೆ ಹೂಡಿಕೆಗಿಂತ ಹೆಚ್ಚು ಗಳಿಕೆಯನ್ನು ತಂದುಕೊಟ್ಟಿದೆ. ಆದರೆ ಚಿನ್ನದ ಬೆಲೆ ಒಂದಷ್ಟು ಕಾಲ ಏರಿಕೆ ಹಾದಿಯಲ್ಲಿ ಸಾಗಿದರೆ ಒಂದಷ್ಟು ಕಾಲ ಸ್ಥಿರವಾಗಿ ನಿಂತುಬಿಡುತ್ತದೆ.
ರಿಸ್ಕ್: ಚಿನ್ನದ ಮೇಲಿನ ಹೂಡಿಕೆಯಲ್ಲಿ ರಿಸ್ಕ್ ಕಡಿಮೆ. ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಚಿನ್ನದ ಮೇಲೆ ಹೆಚ್ಚು ಹೂಡಿಕೆಯಾಗುವ ಕಾರಣ ಚಿನ್ನಕ್ಕೆ ಸದಾ ಬೇಡಿಕೆ ಇರುತ್ತದೆ. ಜಾಗತಿಕ ಮಟ್ಟದಲ್ಲಿ ಬೆಲೆ ಬದಲಾವಣೆಗಳಾದರೆ ಅದರ ಪರಿಣಾಮ ಚಿನ್ನದ ಮೇಲಿರುತ್ತದೆ.
ತೆರಿಗೆ: ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿ 12 ತಿಂಗಳಿಗಿಂತ ಹೆಚ್ಚು ಸಮಯವಾಗಿದ್ದರೆ ಗಳಿಕೆ ಮೇಲೆ ಶೇ 12.5ರಷ್ಟು ಎಲ್‌ಟಿಸಿಜಿ ತೆರಿಗೆ ಅನ್ವಯಿಸುತ್ತದೆ. ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿ 12 ತಿಂಗಳ ಒಳಗೇ ಮಾರಾಟ ಮಾಡಿದರೆ ಹೂಡಿಕೆದಾರನ ತೆರಿಗೆ ಹಂತಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ ಪಿಪಿಎಫ್‌ನಲ್ಲಿರುವ ತೆರಿಗೆ ರಹಿತ ಲಾಭ ಇಲ್ಲಿ ಸಿಗದು.
ಕಿವಿಮಾತು: ದೀರ್ಘಾವಧಿಗೆ ಹೂಡಿಕೆ ಮಾಡುವಾಗ ಯಾವುದೇ ಒಂದು ಹೂಡಿಕೆಯನ್ನು ನೆಚ್ಚಿಕೊಂಡು ಮುಂದುವರಿಯಬಾರದು. ಹೂಡಿಕೆಯಲ್ಲಿ ಸದಾ ವೈವಿಧ್ಯ ಕಾಯ್ದುಕೊಳ್ಳಬೇಕು. ಎಸ್ಐಪಿ ಮೂಲಕ ಶೇ 60ರಷ್ಟು, ಪಿಪಿಎಫ್‌ನಲ್ಲಿ ಶೇ 20ರಷ್ಟು ಮತ್ತು ಚಿನ್ನದ ಮೇಲೆ ಶೇ 20ರಷ್ಟು ಹೂಡಿಕೆ ಹಂಚಿಕೆಯನ್ನು ಪರಿಗಣಿಸಬಹುದು. ಈ ಹೂಡಿಕೆ ನಿರ್ಧಾರ ಮಾಡುವ ಮುನ್ನ ಅಧ್ಯಯನ ಮಾಡಿ. ನಿಮಗೆ ತಿಳಿಯುವುದಿಲ್ಲ ಎಂದಾದರೆ ಸೆಬಿ ನೋಂದಾಯಿತ ಪರಿಣತರ ಸಲಹೆ ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.