ADVERTISEMENT

ಬಂಡವಾಳ ಮಾರುಕಟ್ಟೆ | ಎಸ್‌ಐಪಿ ಯಾವಾಗ ನಿಲ್ಲಿಸಬೇಕು?

ಅವಿನಾಶ್ ಕೆ.ಟಿ
Published 10 ಅಕ್ಟೋಬರ್ 2022, 1:44 IST
Last Updated 10 ಅಕ್ಟೋಬರ್ 2022, 1:44 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಷೇರು ಅಥವಾ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಹಿಂಪಡೆಯಲು (ನಗದೀಕರಿಸಲು) ಸೂಕ್ತ ಸಮಯ ಯಾವುದು? ಈಗ ಹಿಂಪಡೆದರೆ ಒಳಿತಾ? ಇನ್ನೂ ಲಾಭಗಳಿಕೆಯ ಸಾಧ್ಯತೆ ಇದೆಯಾ?

ಷೇರು ಮಾರುಕಟ್ಟೆ ಸೂಚ್ಯಂಕಗಳು ದೊಡ್ಡ ಏರಿಕೆ ಕಂಡಾಗ ಅಥವಾ ಹೆಚ್ಚು ಕುಸಿತ ದಾಖಲಿಸಿದಾಗ ಹೂಡಿಕೆದಾರರಿಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ ಇದು. ಬಹುಪಾಲು ಹೂಡಿಕೆದಾರರು ಕೇಳುವ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ.

ಜೋ ಕೆನಡಿ ಘಟನೆ: ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ತಂದೆ ಜೋ ಕೆನಡಿ, ವಾಲ್ ಸ್ಟ್ರೀಟ್‌ನಲ್ಲಿ
1929ರಲ್ಲಿ ಹೂಡಿಕೆ ಸಂಸ್ಥೆಯೊಂದನ್ನು ನಡೆಸು
ತ್ತಿದ್ದರು. ಆ ಸಂದರ್ಭದಲ್ಲಿ ಜೋ ಕೆನಡಿಯವರ ಬೂಟ್ ಪಾಲಿಶ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಷೇರುಗಳ ಬಗ್ಗೆ ಟಿಪ್ಸ್ ಕೊಡಲು ಶುರು ಮಾಡಿದ. ಆ ಕ್ಷಣದಲ್ಲಿ ಜೋ ಕೆನಡಿ ಅವರಿಗೆ, ‘ಮಾರುಕಟ್ಟೆಯಲ್ಲಿ ತಲೆಬುಡವಿಲ್ಲದ ತರ್ಕರಹಿತ ಲೆಕ್ಕಾಚಾರಗಳು ಆರಂಭವಾಗಿದ್ದು, ಹೂಡಿಕೆ ಬಗ್ಗೆ ಒಂದು ಸಮೂಹಸನ್ನಿಯ ಸಂದರ್ಭ ನಿರ್ಮಾಣವಾಗಿದೆ’ ಅನಿಸತೊಡಗಿತು. ಪೇಟೆ
ಯಲ್ಲಿನ ಗೂಳಿ ಓಟ ಕೊನೆಗೊಳ್ಳಬಹುದು ಎಂಬ ಅಂದಾಜಾಯಿತು. ಹೀಗೆ ಅಂದಾಜು ಮಾಡಿದ ಜೋ ಕೆನಡಿ, ಕೂಡಲೇ ತಮ್ಮ ಷೇರುಗಳನ್ನು ಮಾರಾಟ ಮಾಡಿ ಲಾಭ ಗಳಿಸಿಕೊಳ್ಳಲು ಮುಂದಾದರು.

ADVERTISEMENT

1929ರ ಆರ್ಥಿಕ ಕುಸಿತ ಆರಂಭವಾಗುವ ವೇಳೆಗೆ ಜೋ ಕೆನಡಿ ಬಹುತೇಕ ಹೂಡಿಕೆಗಳನ್ನು ಹಿಂಪಡೆದು ಲಾಭ ಗಳಿಸಿಕೊಂಡಿದ್ದರು. ಈ ಘಟನೆಯು ಹೂಡಿಕೆಗಳನ್ನು ಸರಿಯಾದ ಸಮಯಕ್ಕೆ ಹಿಂಪಡೆದು ಲಾಭ ಮಾಡಿಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿಕೊಡುತ್ತದೆ.

ಕುಸಿತದ ಮುನ್ಸೂಚನೆ ಮತ್ತು ನಗದೀಕರಣ: ಕಂಪನಿ ಎಷ್ಟು ಗಳಿಕೆ ಮಾಡಿದೆ ಎನ್ನುವುದನ್ನು ತಿಳಿಸುವ ಬದಲು ಕಂಪನಿ ಬೆಳವಣಿಗೆ ಸಾಧಿಸಿದೆ ಎಂದಷ್ಟೇ ಹೇಳುವ ಸಂದರ್ಭ ಬಂದರೆ ಅದು ಮಾರುಕಟ್ಟೆ ಮುಗ್ಗರಿಸುವ ಸೂಚನೆ ಎಂದುಕೊಳ್ಳಬಹುದು. ಕೆಲವು ಷೇರುಗಳು ಕಾರಣವಿಲ್ಲದೆ ಏರಿಕೆ ಕಂಡರೆ ಅದು ಮಾರುಕಟ್ಟೆ ತಳಮಳದ ಮುನ್ಸೂಚನೆ. ಕೆಲವು ಸಣ್ಣ ಕಂಪನಿಗಳ ಷೇರು ಬೆಲೆಯ ಗಣನೀಯ ಏರಿಕೆ ಕೂಡ ಮಾರುಕಟ್ಟೆ ನೆಲಕಚ್ಚುವುದರ ಒಂದು ಲಕ್ಷಣ. ಐಪಿಒಗಳಲ್ಲಿ ಜನ ಅತಿಯಾಗಿ ಹೂಡಿಕೆ ಮಾಡಲು ಮುಂದಾಗುತ್ತಿದ್ದರೆ, ಮಾರುಕಟ್ಟೆ ಕುಸಿತದ ಸಾಧ್ಯತೆಯಿದೆ ಎಂದು ಹೂಡಿಕೆದಾರ ಜಾಗೃತನಾಗಬೇಕು.

ಕಂಪನಿಗಳ ಮೌಲ್ಯ ಮಾಪನದಲ್ಲಿ ಅತಿಯಾದ ಹೆಚ್ಚಳವೂ, ಮಾರುಕಟ್ಟೆ ಇಳಿಕೆಯತ್ತ ಸಾಗಿದೆ ಎನ್ನುವುದರ ಸೂಚಕ. ಇಂತಹ ಸಂದರ್ಭಗಳಲ್ಲಿ ಹೂಡಿಕೆಯ ಒಂದಷ್ಟು ಮೊತ್ತವನ್ನು ನಗದೀಕರಿಸುವುದು ಸೂಕ್ತ. ಎಸ್‌ಐಪಿ (ಅಂದರೆ ವ್ಯವಸ್ಥಿತ ಹೂಡಿಕೆ ಯೋಜನೆ) ಮಾಡುವಾಗ ಹೇಗೆ ನಿಮಗೆ ಸರಾಸರಿ ಲಾಭವಾಗುತ್ತದೋ ಅದೇ ರೀತಿಯಲ್ಲಿ ಹೂಡಿಕೆಗಳ ನಗದೀಕರಣ ಮಾಡುವಾಗಲೂ ಹಂತ ಹಂತವಾಗಿ ಹೂಡಿಕೆ ಹಿಂಪಡೆದರೆ ಸರಾಸರಿಯ ಲಾಭ ದೊರಕುತ್ತದೆ.

ಷೇರು, ಮ್ಯೂಚುವಲ್ ಫಂಡ್‌ ನಗದೀಕರಣ ಮಾಡುವಾಗ ಅದರ ಮರು ಹೂಡಿಕೆ ಯೋಜನೆಯೂ ನಿಮ್ಮಲ್ಲಿರಬೇಕು. ನಗದೀಕರಣ ಮಾಡಿದ ಮೊತ್ತವನ್ನು ನಿಶ್ಚಿತ ಠೇವಣಿ (ಎಫ್.ಡಿ), ಚಿನ್ನ, ಅಲ್ಪಾವಧಿ ಡೆಟ್ ಫಂಡ್‌ಗಳಂತಹ ಸುರಕ್ಷಿತ ಹೂಡಿಕೆಗಳಲ್ಲಿ ತೊಡಗಿಸುವ ಯೋಜನೆ ಹಾಕಿಕೊಳ್ಳಬೇಕು.

ಗುರಿ ತಲುಪುವಿಕೆ ಮತ್ತು ನಗದೀಕರಣ: ಹೂಡಿಕೆ ಮಾಡುವಾಗ ನಮಗೆ ನಿರ್ದಿಷ್ಟ ಗುರಿ ಇರುತ್ತದೆ. ಅದು ಲ್ಯಾಪ್‌ಟಾಪ್ ಖರೀದಿ, ಶಾಲೆ ಶುಲ್ಕ ಪಾವತಿಯಂತಹ ಅಲ್ಪಾವಧಿ ಗುರಿ ಇರಬಹುದು ಅಥವಾ ಮನೆ ಖರೀದಿ, ಕಾರು ಖರೀದಿಯಂತಹ ದೀರ್ಘಾವಧಿ ಗುರಿ ಇರಬಹುದು. ನಿಮ್ಮ ನಿರ್ದಿಷ್ಟ ಹಣಕಾಸಿನ ಗುರಿ ತಲುಪಿದಾಗ ಎಸ್‌ಐಪಿ ಹೂಡಿಕೆಗಳ ನಗದೀಕರಣಕ್ಕೆ ಮುಂದಾಗಬಹುದು. ದೀರ್ಘಾವಧಿ ಹೂಡಿಕೆಗಳ ವಿಚಾರಕ್ಕೆ ಬಂದಾಗ ನಿಮ್ಮ ನಿರ್ದಿಷ್ಟ ಹಣಕಾಸಿನ ಗುರಿ ತಲುಪುವ ಮುನ್ನವೇ ಹೂಡಿಕೆ ನಗದೀಕರಣ ಯೋಜನೆ ಜಾರಿಗೆ ತರಬೇಕು.

ಉದಾಹರಣೆಗೆ, ನೀವು ₹ 50 ಲಕ್ಷ ಮೌಲ್ಯದ ಫ್ಲ್ಯಾಟ್ ಖರೀದಿ ಉದ್ದೇಶಕ್ಕಾಗಿ ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಹಲವು ವರ್ಷಗಳಿಂದ ಹೂಡಿಕೆ ಮಾಡುತ್ತಾ ಬಂದಿದ್ದು, ₹ 40 ಲಕ್ಷ ಮೊತ್ತದ ಗುರಿಯನ್ನು ಮ್ಯೂಚುವಲ್ ಫಂಡ್ ಹೂಡಿಕೆ ಮೂಲಕ ಸಾಧಿಸಿದ್ದೀರಿ ಎಂದಿಟ್ಟುಕೊಳ್ಳಿ. ಈ ಹಂತದಲ್ಲಿ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಉಂಟಾಗಿ, ನಿಮ್ಮ ₹ 40 ಲಕ್ಷವುಇದ್ದಕ್ಕಿದ್ದಂತೆ ₹ 30 ಲಕ್ಷಕ್ಕೆ ಕುಸಿದುಬಿಡುತ್ತದೆ ಎಂದು ಭಾವಿಸಿ. ಹೀಗಾಗಲು ಬಿಡುವುದು ಸರಿಯೇ?

ಖಂಡಿತ ಇಲ್ಲ. ಇಂತಹ ಇಕ್ಕಟ್ಟಿನ ಸಂದರ್ಭ ಎದುರಾಗದಂತೆ ನೋಡಿಕೊಳ್ಳಲು ನೀವು ಗುರಿ ತುಲುಪುವ ಹಂತದಲ್ಲಿರುವಾಗಲೇ ಕ್ರಮಬದ್ಧವಾಗಿ ಹೂಡಿಕೆ ನಗದೀಕರಣಕ್ಕೆ ಮುಂದಾಗಬೇಕು. ಹೆಚ್ಚು ರಿಸ್ಕ್ ಇರುವ ಈಕ್ವಿಟಿ ಮ್ಯೂಚುವಲ್ ಫಂಡ್‌ನಿಂದ ನಿಶ್ಚಿತ ಠೇವಣಿಯಂತಹ ಸುರಕ್ಷಿತ ಹೂಡಿಕೆಗಳಿಗೆ ಹಣ ವರ್ಗಾಯಿಸಿಕೊಳ್ಳಬೇಕು. ಫಂಡ್‌ನಿಂದ ಸಿಗುವ ಲಾಭ ಕಳಪೆ ಆಗಿದ್ದರೆ ಆ ಫಂಡ್‌ನಿಂದ ಹೊರಬರುವ ಆಲೋಚನೆ ಮಾಡಬಹುದು. ಹೀಗೆ ಮಾಡಿದಾಗ ನಿಮಗೆ ಉಂಟಾಗುವ ಸಂಭಾವ್ಯ ನಷ್ಟವನ್ನು ತಗ್ಗಿಸಬಹುದು.

ಫೋರ್ಟ್‌ಫೋಲಿಯೊ ಪರಿಷ್ಕರಣೆಗೆ: ಸಾಮಾನ್ಯವಾಗಿ, ಉಳಿತಾಯದ ಶೇಕಡ 60ರಷ್ಟು ಹಣವನ್ನು ಷೇರುಪೇಟೆಯಲ್ಲಿ ಹಾಗೂ ಶೇ 40ರಷ್ಟು ಹಣವನ್ನು ಸುರಕ್ಷಿತ ಹೂಡಿಕೆಗಳಲ್ಲಿ ತೊಡಗಿಸಬೇಕೆಂದು ನೀವು ತೀರ್ಮಾನಿಸಿರುತ್ತೀರಿ. ಆದರೆ ಮಾರುಕಟ್ಟೆ ಏರಿಳಿತದ ಕಾರಣದಿಂದ ಪೋರ್ಟ್‌ಫೋಲಿಯೊದಲ್ಲಿ ಈ ಮಾನದಂಡದಲ್ಲಿ ವ್ಯತ್ಯಾಸವಾದಾಗ ಅದನ್ನು ಸರಿಪಡಿಸಿಕೊಳ್ಳಲು ಹೂಡಿಕೆಯ ಕೆಲವು ಭಾಗವನ್ನು ನಗದೀಕರಿಸಬೇಕಾಗುತ್ತದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

***

ಚೇತರಿಕೆ ಕಂಡ ಷೇರುಪೇಟೆ ಸೂಚ್ಯಂಕಗಳು

ಅಕ್ಟೋಬರ್ 7ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಚೇತರಿಕೆ ಕಂಡಿವೆ. 58,191 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.33ರಷ್ಟು ಗಳಿಸಿಕೊಂಡಿದೆ. 17,314 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇ 1.28ರಷ್ಟು ಗಳಿಕೆ ದಾಖಲಿಸಿದೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಖರೀದಿ ಭರಾಟೆ, ಜಿಎಸ್‌ಟಿ ಸಂಗ್ರಹ ಹೆಚ್ಚಳ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಪ್ರತಿಕ್ರಿಯೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ.

ರೂಪಾಯಿ ಮೌಲ್ಯ ಕುಸಿತ ಮಾರುಕಟ್ಟೆ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ವಲಯವಾರು ಪ್ರಗತಿಯಲ್ಲಿ ಬಿಎಸ್‌ಇ ಲೋಹ ವಲಯ ಶೇ 5.7ರಷ್ಟು ಜಿಗಿದಿದೆ. ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 3.6ರಷ್ಟು, ರಿಯಾಲ್ಟಿ ಸೂಚ್ಯಂಕ ಶೇ 3.4ರಷ್ಟು ಹೆಚ್ಚಳ ಕಂಡಿವೆ. ಎಫ್‌ಎಂಸಿಜಿ ಸೂಚ್ಯಂಕ ಶೇ 1ರಷ್ಟು ಇಳಿಕೆಯಾಗಿದೆ. ದೇಶಿ ಹೂಡಿಕೆದಾರರು ಕಳೆದ ವಾರ ₹ 1,024.09 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಜಿಗಿದಿದ್ದು ಜೊಮ್ಯಾಟೊ, ಪೇಟಿಎಂ, ಜೈಡಸ್ ಲೈಫ್ ಸೈನ್ಸಸ್, ಕೋಲ್ ಇಂಡಿಯಾ, ವೇದಾಂತ, ಹಿಂದೂಸ್ಥಾನ್ ಜಿಂಕ್ ಮತ್ತು ಎನ್‌ಎಂಡಿಸಿ ಗಳಿಕೆ ದಾಖಲಿಸಿವೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 2ರಷ್ಟು ಹೆಚ್ಚಳ ದಾಖಲಿಸಿದ್ದು ಜೆಎಸ್‌ಡಬ್ಲ್ಯೂ ಎನರ್ಜಿ, ಭಾರತ್ ಫೋರ್ಜ್, ಜೀ ಎಂಟರ್‌ಟೇನ್ಮೆಂಟ್ ಎಂಟರ್‌ಪ್ರೈಸಸ್, ಮಹಿಂದ್ರ ಆ್ಯಂಡ್‌ ಮಹಿಂದ್ರ ಫೈನಾನ್ಸಿಯಲ್ ಸರ್ವಿಸಸ್, ದೀಪಕ್ ನೈಟ್ರೇಟ್, ಆಯಿಲ್ ಇಂಡಿಯಾ ಮತ್ತು ಪರ್ಸಿಸ್ಟೆಂಟ್ ಸಿಸ್ಟಮ್ಸ್ ಗಳಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.