ADVERTISEMENT

5ಜಿ ಹರಾಜು: ಜಿಯೊದಿಂದ ಅತಿ ಹೆಚ್ಚಿನ ಬಿಡ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:15 IST
Last Updated 1 ಆಗಸ್ಟ್ 2022, 21:15 IST
   

ನವದೆಹಲಿ: ದೂರಸಂಪರ್ಕ ತರಂಗಾಂತರಗಳ ಅತಿ ದೊಡ್ಡ ಹರಾಜು ಪ್ರಕ್ರಿಯೆಯಲ್ಲಿ 5ಜಿ ತರಂಗಾಂತರಗಳಿಗೆ ಒಟ್ಟು ₹ 1.50 ಲಕ್ಷ ಕೋಟಿ ಮೌಲ್ಯದ ಬಿಡ್‌ಗಳು ಸಲ್ಲಿಕೆಯಾಗಿವೆ.

ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೊ ಕಂಪನಿಯು ಸರಿಸುಮಾರು ಶೇಕಡ 50ರಷ್ಟು
ತರಂಗಾಂತರಗಳಿಗೆ ಬಿಡ್ ಸಲ್ಲಿಸಿದೆ. ಜಿಯೊ ಸಲ್ಲಿಸಿರುವ ಬಿಡ್‌ ಮೊತ್ತ ₹ 88,078 ಕೋಟಿ.

ದೇಶದ ಅತ್ಯಂತ ಶ್ರೀಮಂತವ್ಯಕ್ತಿಯಾಗಿರುವ ಗೌತಮ್ ಅದಾನಿ ಮಾಲೀಕತ್ವದ ಕಂಪನಿಯು ಒಟ್ಟು
₹ 212 ಕೋಟಿ ಮೌಲ್ಯದ ತರಂಗಾಂತರಗಳಿಗೆ ಬಿಡ್ ಸಲ್ಲಿಸಿದೆ. ಅದಾನಿ ಅವರ ಕಂಪನಿಯು ಪಡೆಯಲಿರುವ ತರಂಗಾಂತರಗಳು ಸಾರ್ವಜನಿಕ ನೆಟ್‌ವರ್ಕ್‌ ಸ್ಥಾಪಿಸಲು ಬಳಕೆ ಆಗುವುದಿಲ್ಲ.

ADVERTISEMENT

ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್‌ಟೆಲ್‌ ಕಂಪನಿಯು ಒಟ್ಟು ₹ 43,084 ಕೋಟಿ ಮೌಲ್ಯದ ಬಿಡ್ ಸಲ್ಲಿಸಿದೆ. ವೊಡಾಫೋನ್ ಐಡಿಯಾ ಕಂಪನಿಯು ₹ 18,799 ಕೋಟಿ ಮೌಲ್ಯದ ಬಿಡ್ ಸಲ್ಲಿಸಿದೆ.

ಹರಾಜಿನ ಮೂಲಕ ಮಾರಾಟಕ್ಕೆ ಇದ್ದ ತರಂಗಾಂತರಗಳ ಪೈಕಿ ಶೇಕಡ 71ರಷ್ಟು ಮಾರಾಟವಾಗಿವೆ ಎಂದು ಕೇಂದ್ರ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಸಲ್ಲಿಕೆಯಾಗಿರುವ ಒಟ್ಟು ಬಿಡ್‌ ಮೊತ್ತದಲ್ಲಿ ಕೇಂದ್ರ ಸರ್ಕಾರಕ್ಕೆ ಮೊದಲ ವರ್ಷದಲ್ಲಿ ₹ 13,365 ಕೋಟಿ ಸಿಗಲಿದೆ.

2010ರಲ್ಲಿ ನಡೆದ 3ಜಿ ತರಂಗಾಂತರಗಳ ಹರಾಜಿನ ಮೂಲಕ ಒಟ್ಟು ₹ 50,968 ಕೋಟಿ ಸಂಗ್ರಹಿಸಲಾಗಿತ್ತು.

ರಿಲಯನ್ಸ್ ಜಿಯೊ ಕಂಪನಿಯು ಐದು ಬ್ಯಾಂಡ್‌ಗಳಲ್ಲಿನ ತರಂಗಾಂತರಗಳಿಗೆ ಬಿಡ್ಸಲ್ಲಿಸಿದೆ. ಭಾರಿ ಬೇಡಿಕೆಯ 700 ಮೆಗಾ ಹರ್ಟ್ಜ್ ತರಂಗಾಂತರವನ್ನು ಜಿಯೊಖರೀದಿಸಿದೆ. ಈ ತರಂಗಾಂತರ ಬಳಸಿ ಒಂದು ಟವರ್‌ನಿಂದ 6ರಿಂದ 10 ಕಿ.ಮೀ. ದೂರದವರೆಗೆ ಸಂಪರ್ಕ ಒದಗಿಸಬಹುದು. ದೇಶದ ಅಷ್ಟೂ ದೂರಸಂಪರ್ಕ ವೃತ್ತಗಳಲ್ಲಿ (ಒಟ್ಟು 22 ವೃತ್ತಗಳು) ಈ ತರಂಗಾಂತರವನ್ನು ಜಿಯೊ ಖರೀದಿಸಿದೆ.

ಅದಾನಿ ಸಮೂಹವು ಖಾಸಗಿ ನೆಟ್‌ವರ್ಕ್‌ ಸ್ಥಾಪನೆಗೆ ಅಗತ್ಯವಿರುವ ತರಂಗಾಂತರಗಳನ್ನು ಗುಜರಾತ್, ಮುಂಬೈ, ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮತ್ತು ಆಂಧ್ರಪ್ರದೇಶ ದೂರಸಂಪರ್ಕ ವೃತ್ತಗಳಲ್ಲಿ ಪಡೆದುಕೊಂಡಿದೆ.

ಏರ್‌ಟೆಲ್‌ ಕಂಪನಿಯು 700 ಮೆಗಾ ಹರ್ಟ್ಜ್‌ ತರಂಗಾಂತರವನ್ನು ಖರೀದಿಸಿಲ್ಲ. ‘ಹರಾಜಿನ ಮೂಲಕ ಖರೀದಿಸಿರುವ ತರಂಗಾಂತರಗಳು ದೇಶದ ಅಷ್ಟೂ ದೂರಸಂಪರ್ಕ ವೃತ್ತಗಳಲ್ಲಿ ಸೇವೆ ಆರಂಭಿಸಲು ಸಾಕು. ಇನ್ನು 2–3 ವರ್ಷಗಳಲ್ಲಿ ಒಳ್ಳೆಯ 5ಜಿ ಸಂಪರ್ಕ ಸಾಧ್ಯವಾಗಲಿದೆ’ ಎಂದು ವೈಷ್ಣವ್ ಹೇಳಿದ್ದಾರೆ.

5ಜಿ ತರಂಗಾಂತರಗಳ ಹಂಚಿಕೆಯು ಇದೇ 10ರೊಳಗೆ ಪೂರ್ಣಗೊಳ್ಳಲಿದ್ದು, ಸೇವೆಗಳು ಅಕ್ಟೋಬರ್‌ನಿಂದ ಶುರುವಾಗುವ ಸಾಧ್ಯತೆ ಇದೆ. ಕರೆ ಗುಣಮಟ್ಟ ಕೂಡ ಸುಧಾರಣೆ ಕಾಣುವ ನಿರೀಕ್ಷೆ ಇದೆ.

5ಜಿ ಸೇವೆ ಶುರುವಾದ ನಂತರ...

*ಬಳಕೆದಾರರು ಜಾಸ್ತಿ ಇರುವ ಪ್ರದೇಶದಲ್ಲಿಯೂ ದೊಡ್ಡ ಕಡತಗಳನ್ನು (ಉದಾಹರಣೆಗೆ, ಉತ್ತಮ ದೃಶ್ಯ ಗುಣಮಟ್ಟದ ಸಿನಿಮಾಗಳನ್ನು) ಕೆಲವೇ ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು

*4ಜಿ ಸೇವೆಗಳಲ್ಲಿ ಲಭ್ಯವಾಗುವುದಕ್ಕಿಂತ ಹತ್ತು ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕ ಲಭ್ಯವಾಗಲಿದೆ

*ಇಂಟರ್ನೆಟ್ ಮೂಲಕ ಸಂಪರ್ಕಿತವಾಗಿರುವ ಡಿಜಿಟಲ್ ಸಾಧನಗಳು ದತ್ತಾಂಶಗಳನ್ನು ತಕ್ಷಣದಲ್ಲಿ ಹಂಚಿಕೊಳ್ಳಲು ಸಾಧ್ಯವಾಗಲಿದೆ

*ಟೆಲಿ ಮೆಡಿಸಿನ್, ಚಾಲಕರಹಿತ ಕಾರು, ಡ್ರೋನ್ ಆಧರಿತ ಕೃಷಿ ನಿಗಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಆಗಬಹುದು

*ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ (ಐಒಟಿ) ಉದಯೋನ್ಮುಖ ತಂತ್ರಜ್ಞಾನಗಳಿಗೆ 5ಜಿ ಸೇವೆಗಳು ಬೆನ್ನೆಲುಬಾಗಿ ನಿಲ್ಲುವ ನಿರೀಕ್ಷೆಯಿದೆ.

****

ಈ ಬಾರಿ ಹರಾಜಿಗೆ ಇರಿಸಿದ್ದ ತರಂಗಾಂತರಗಳ ಮೌಲ್ಯ:₹ 4.3 ಲಕ್ಷ ಕೋಟಿ

ತರಂಗಾಂತರಗಳಿಗೆ ಸಲ್ಲಿಕೆಯಾಗಿರುವ ಬಿಡ್‌ಗಳ ಒಟ್ಟು ಮೌಲ್ಯ:₹ 1.50 ಲಕ್ಷ ಕೋಟಿ

****

ಭಾರತವು 5ಜಿ ಯುಗಕ್ಕೆ ಕಾಲಿರಿಸುವ ಪ್ರಕ್ರಿಯೆಗೆ ನಾಯಕತ್ವ ನೀಡಲು ಜಿಯೊ ಸಜ್ಜಾಗಿದೆ. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶದಾದ್ಯಂತ 5ಜಿ ಸೇವೆ ಆರಂಭಿಸುವ ಮೂಲಕ ಆಚರಿಸಲಿದ್ದೇವೆ

ಆಕಾಶ್ ಅಂಬಾನಿ ಅಧ್ಯಕ್ಷ, ಜಿಯೊ ಇನ್ಫೊಕಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.