ADVERTISEMENT

ಜಿಮ್‌: ಚರ್ಚೆಯಲ್ಲಿ 75 ಸಾಧಕರು ಭಾಗಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:06 IST
Last Updated 5 ಫೆಬ್ರುವರಿ 2025, 16:06 IST
ನವದೆಹಲಿಯಲ್ಲಿ ಬುಧವಾರ ಸಚಿವ ಎಂ.ಬಿ. ಪಾಟೀಲ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಅಧಿಕೃತವಾಗಿ ಆಹ್ವಾನಿಸಿದರು. ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದ್ದರು
ನವದೆಹಲಿಯಲ್ಲಿ ಬುಧವಾರ ಸಚಿವ ಎಂ.ಬಿ. ಪಾಟೀಲ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಅಧಿಕೃತವಾಗಿ ಆಹ್ವಾನಿಸಿದರು. ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದ್ದರು   

ಬೆಂಗಳೂರು: ‘ಇದೇ 11ರಿಂದ 14ರ ವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್‌) ಶಶಿ ತರೂರ್, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಪಪಾಂಡ್ರಿಯೂ, ವೋಲ್ವೊ ಸಮೂಹದ ಅಧ್ಯಕ್ಷ ಮಾರ್ಟಿನ್ ಲುಂಡ್ ಸ್ಟೆಡ್ ಸೇರಿ 75 ಸಾಧಕ ಉದ್ಯಮಿಗಳು ಮಾತನಾಡಲಿದ್ದಾರೆ’ ಎಂದು ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ತಿಳಿಸಿದ್ದಾರೆ.

‘ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರಮಂಗಲಂ‌ ಬಿರ್ಲಾ, ಜಿಂದಾಲ್ ಸ್ಟೀಲ್ ವರ್ಕ್ಸ್ ವ್ಯವಸ್ಥಾಪಕ‌ ನಿರ್ದೇಶಕ ಸಜ್ಜನ್ ಜಿಂದಾಲ್, ಆಯುಷ್ಮಾನ್ ಭಾರತ ಯೋಜನೆಯ ಮಾಜಿ‌ ಸಿಇಒ ಇಂದುಭೂಷಣ್, ಸಿನಿಮಾ ನಿರ್ಮಾಪಕಿ‌ ಕಿರಣ್ ರಾವ್, ಇಸ್ರೊ  ಮಾಜಿ ಅಧ್ಯಕ್ಷ ಸೋಮನಾಥ್, ಏಕಸ್ ಸಿಇಒ ಅರವಿಂದ್ ಮೆಳ್ಳಿಗೇರಿ, ಅಮೆರಿಕದ ಇಂಧನ‌ ಇಲಾಖೆಯ ಸಿಐಒ ಆ್ಯನ್ ಡಂಕಿನ್, ಝೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಕಿರ್ಲೋಸ್ಕರ್ ಸಮೂಹದ ಎಂ.ಡಿ ಗೀತಾಂಜಲಿ‌ ಕಿರ್ಲೋಸ್ಕರ್ ಅವರು ಸಮಾವೇಶದ ವಿವಿಧ ಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ಸಮಾವೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. 30ಕ್ಕೂ ಹೆಚ್ಚು ಚಿಂತನಾ ಗೋಷ್ಠಿ ಏರ್ಪಡಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು ಹಾಗೂ ನವೋದ್ಯಮಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಭವಿಷ್ಯದ ತಂತ್ರಜ್ಞಾನ, ಆರ್ಥಿಕತೆ ಮತ್ತು ಕೈಗಾರಿಕಾ ಉದ್ಯಮ ಕುರಿತು ಸಮಾವೇಶದಲ್ಲಿ ಮೂರು ದಿನಗಳ ಕಾಲ ಚರ್ಚಿಸಲಾಗುವುದು ಎಂದು ವಿವರಿಸಿದ್ದಾರೆ.

ADVERTISEMENT

‘ಸಮಾವೇಶದ ಮೂಲಕ ₹10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಶೇ 80ರಷ್ಟಾದರೂ ನೈಜ ಹೂಡಿಕೆಯಾಗಿ ಬರಬೇಕು ಎನ್ನುವುದು ನಮ್ಮ ಪ್ರಯತ್ನ’ ಎಂದು ಅವರು ಹೇಳಿದ್ದಾರೆ.

ನಿರ್ಮಲಾ, ಪಿಯೂಷ್‌ಗೆ ಆಹ್ವಾನ: ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಎಂ‌.ಬಿ. ಪಾಟೀಲ ಅವರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ. 

ಸಮಾವೇಶದ ವೈಶಿಷ್ಟ್ಯಗಳು, ರಾಜ್ಯ ಸರ್ಕಾರದ ನೂತನ‌ ಕೈಗಾರಿಕಾ ನೀತಿ ಹಾಗೂ ಸ್ವಚ್ಛ ಇಂಧನ‌ ನೀತಿ ಕುರಿತು ನಿರ್ಮಲಾ ಅವರಿಗೆ ಸಚಿವರು ಇದೇ ವೇಳೆ ಮಾಹಿತಿ ನೀಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.