ADVERTISEMENT

ಎಬಿಜಿ ಶಿಪ್‌ಯಾರ್ಡ್‌ ಪ್ರಕರಣ: ಕಂಪನಿಯ ಮಾಜಿ ಅಧ್ಯಕ್ಷ ರಿಶಿ ಪ್ರಶ್ನಿಸಿದ ಸಿಬಿಐ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2022, 15:52 IST
Last Updated 17 ಫೆಬ್ರುವರಿ 2022, 15:52 IST
ಎಬಿಜಿ ಶಿಪ್‌ಯಾರ್ಡ್‌
ಎಬಿಜಿ ಶಿಪ್‌ಯಾರ್ಡ್‌   

ನವದೆಹಲಿ: ಬ್ಯಾಂಕ್‌ಗಳ ಒಕ್ಕೂಟಕ್ಕೆ ₹22,842 ಕೋಟಿ ಮೊತ್ತದ ವಂಚನೆ ಎಸಗಿರುವ ಆರೋಪದ ಅಡಿ ಎಬಿಜಿ ಶಿಪ್‌ಯಾರ್ಡ್‌ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಶಿ ಕಮಲೇಶ್‌ ಅಗರ್‌ವಾಲ್‌ ಅವರನ್ನು ಗುರುವಾರ ಸಿಬಿಐ ಪ್ರಶ್ನಿಸಿದೆ.

ರಿಶಿ ಅಗರ್‌ವಾಲ್‌ ವಿರುದ್ಧ ಸಿಬಿಐ ನಿನ್ನೆ ಎಫ್‌ಐಆರ್‌ ದಾಖಲಿಸಿಕೊಂಡಿತ್ತು ಹಾಗೂ ಸೂರತ್, ಮುಂಬೈ, ಪುಣೆ ಹಾಗೂ ಭರುಚ್‌ ಸೇರಿದಂತೆ 13 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಅದರ ಬೆನ್ನಲ್ಲೇ ಇಂದು ರಿಶಿ ಅವರನ್ನು ಸಿಬಿಐ ಪ್ರಶ್ನಿಸಿದೆ.

28 ಬ್ಯಾಂಕ್‌ಗಳಿಗೆ ವಂಚನೆ ಮಾಡಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಬಿಜಿ ಶಿಪ್‌ಯಾರ್ಡ್‌ ಲಿಮಿಟೆಡ್‌ ವಿರುದ್ಧ ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಕಂಪನಿಗೆ ಸಂಬಂಧ ಪಟ್ಟ ವ್ಯಕ್ತಿಗಳು ಭಾರತದಲ್ಲಿ ಮತ್ತು ಹೊರ ದೇಶಗಳಲ್ಲಿ ನಡೆಸಿರುವ ಅಕ್ರಮ ಹಣ ವರ್ಗಾವಣೆಯ ಬಗ್ಗೆ ಇ.ಡಿ ತನಿಖೆ ನಡೆಸುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ADVERTISEMENT

ಸಾರ್ವಜನಿಕರ ಹಣವನ್ನು ಬೇರೆಡೆಗೆ ವರ್ಗಾಯಿಸಲು ಸುಮಾರು 100 ಶೆಲ್‌ ಕಂಪನಿಗಳನ್ನು ಬಳಸಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.

1985ರಲ್ಲಿ ಸ್ಥಾಪಿಸಲಾಗಿರುವ ಎಬಿಜಿ ಶಿಪ್‌ಯಾರ್ಡ್‌ ಕಂಪನಿಯು ಐಸಿಐಸಿಐ, ಐಡಿಬಿಐ ಹಾಗೂ 2001ರಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲ ಪಡೆದಿದೆ. ಕಂಪನಿಗೆ ನೀಡಿದ್ದ ಸಾಲವು ಅನುತ್ಪಾದಕ (ಎನ್‌ಪಿಎ) ಆಗಿರುವುದನ್ನು 2013ರ ನವೆಂಬರ್‌ 30ರಂದು ಘೋಷಿಸಿತ್ತು. ಅನುತ್ಪಾದಕ ಸಾಲದ ಮೊತ್ತವು ₹22,842 ಕೋಟಿಯಷ್ಟಿದ್ದು, ಬಹುತೇಕ ಸಾಲದ ವಿತರಣೆಯು 2005ರಿಂದ 2012ರ ಅವಧಿಯಲ್ಲಿ ಆಗಿರುವುದಾಗಿ ಸಿಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.