ADVERTISEMENT

3 ಲಕ್ಷ ಠೇವಣಿದಾರರಿಗೆ ಶೀಘ್ರವೇ ವಿಮಾ ಹಣ: ಪ್ರಧಾನಿ ನರೇಂದ್ರ ಮೋದಿ ಭರವಸೆ

‘ಠೇವಣಿದಾರರು ಮೊದಲು’ ಕಾರ್ಯಕ್ರಮ

ಅನ್ನಪೂರ್ಣ ಸಿಂಗ್
Published 13 ಡಿಸೆಂಬರ್ 2021, 6:32 IST
Last Updated 13 ಡಿಸೆಂಬರ್ 2021, 6:32 IST

ನವದೆಹಲಿ: ಬ್ಯಾಂಕ್‌ ವೈಫಲ್ಯದಿಂದಾಗಿ ಹಣ ಕಳೆದುಕೊಂಡಿರುವ ಅಂದಾಜು ಮೂರು ಲಕ್ಷ ಠೇವಣಿದಾರರಿಗೆ ಅವರ ಹಣವು ಶೀಘ್ರದಲ್ಲಿಯೇ ಮರಳಿ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ಬ್ಯಾಂಕ್‌ ಠೇವಣಿದಾರರಿಗೆ ವಿಮಾ ಸುರಕ್ಷೆಯನ್ನು ₹ 5 ಲಕ್ಷಕ್ಕೆ ಹೆಚ್ಚಿಸುವ ಕಾನೂನು ಜಾರಿಗೆ ಬಂದ ನಂತರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಠೇವಣಿದಾರರು ಒಟ್ಟು ₹ 1,300 ಕೋಟಿ ಪಡೆದುಕೊಂಡಿದ್ದಾರೆ ಎಂದು ಮೋದಿ ಅವರು ಹೇಳಿದರು. ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಇರಿಸಿರುವ ಹಣದ ಸುರಕ್ಷತೆಗೆ ಸಂಬಂಧಿಸಿದ ‘ಠೇವಣಿದಾರರು ಮೊದಲು’ ಎಂಬ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದರು.

ಮೊದಲು ₹ 50 ಸಾವಿರದವೆಗಿನ ಠೇವಣಿ ಹಣಕ್ಕೆ ವಿಮಾ ಸುರಕ್ಷತೆ ಇತ್ತು. ನಂತರ ಈ ಮೊತ್ತವನ್ನು ₹ 1 ಲಕ್ಷಕ್ಕೆ ಹೆಚ್ಚಿಸಲಾಯಿತು. ಆದರೆ, ವಿಮಾ ಹಣ ಪಾವತಿಗೆ ಕಾಲಮಿತಿ ಇರಲಿಲ್ಲ ಎಂದು ಮೋದಿ ಹೇಳಿದರು.

ADVERTISEMENT

‘ಬಡ ಹಾಗೂ ಮಧ್ಯಮ ವರ್ಗದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಾವು ವಿಮಾ ಸುರಕ್ಷತೆಯ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸಿದೆವು. ಅಲ್ಲದೆ, ವಿಮಾ ಹಣವನ್ನು 90 ದಿನಗಳಲ್ಲಿ ಠೇವಣಿದಾರರಿಗೆ ನೀಡಬೇಕು ಎಂದು ಕೂಡ ನಮ್ಮ ಸರ್ಕಾರವು ಹೇಳಿದೆ. ಅಂದರೆ, ಒಂದು ಬ್ಯಾಂಕ್‌ ಮುಳುಗುತ್ತಿದೆ ಎಂದಿದ್ದರೂ ಠೇವಣಿದಾರರಿಗೆ ಅವರ ಹಣವು 90 ದಿನಗಳಲ್ಲಿ ಸಿಗುತ್ತದೆ’ ಎಂದು ಅವರು ಹೇಳಿದರು.

ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದ 90 ದಿನಗಳಲ್ಲಿ₹ 5 ಲಕ್ಷದವರೆಗಿನ ಠೇವಣಿಗಳಿಗೆ ವಿಮಾ ಸುರಕ್ಷತೆಯನ್ನು ಒದಗಿಸುವ ‘ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ’ಗೆ ಸಂಸತ್ತು ಈ ವರ್ಷದ ಆರಂಭದಲ್ಲಿ ಅನುಮೋದನೆ ನೀಡಿದೆ.

ವಿಮಾ ಮೊತ್ತವನ್ನು ಹೆಚ್ಚಿಸಿದ ನಂತರದಲ್ಲಿ, ಸಂಪೂರ್ಣವಾಗಿ ವಿಮಾ ಸುರಕ್ಷೆಗೆ ಒಳಪಟ್ಟ ಖಾತೆಗಳ ಪ್ರಮಾಣವು ಶೇಕಡ 98.1ರಷ್ಟು ಆಗಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ಶೇಕಡ 80ರ ಮಾನದಂಡಕ್ಕಿಂತಲೂ ಶೇ 18ರಷ್ಟು ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.