ADVERTISEMENT

ಅದಾನಿ ಷೇರು ಜಿಗಿತ: ₹15 ಲಕ್ಷ ಕೋಟಿ ದಾಟಿದ ಮಾರುಕಟ್ಟೆ ಮೌಲ್ಯ

ಪಿಟಿಐ
Published 3 ಜನವರಿ 2024, 13:43 IST
Last Updated 3 ಜನವರಿ 2024, 13:43 IST
ಅದಾನಿ ಗ್ರೂಪ್‌
ಅದಾನಿ ಗ್ರೂಪ್‌   

ನವದೆಹಲಿ: ಅದಾನಿ ಸಮೂಹದ ಬಗ್ಗೆ ‘ಹಿಂಡನ್‌ಬರ್ಗ್ ರೀಸರ್ಚ್‌’ ಕಂಪನಿ ಮಾಡಿರುವ ಆರೋಪ ಕುರಿತ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಒಪ್ಪಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಏರಿಕೆ ಕಂಡಿದೆ.

ಬುಧವಾರ ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಇಳಿಕೆಯ ಹಾದಿಯಲ್ಲಿ ಸಾಗಿದರೂ ಸುಪ್ರೀಂ ಕೋರ್ಟ್‌ ಆದೇಶವು ಅದಾನಿ ಕಂಪನಿಗಳ ಪಾಲಿಗೆ ವರದಾನವಾಯಿತು.  

ಅದಾನಿ ಒಡೆತನದ 10 ಕಂಪನಿಗಳ ಮಾರುಕಟ್ಟೆ ಮೌಲ್ಯವು ₹15 ಲಕ್ಷ ಕೋಟಿಯ ಗಡಿ ದಾಟಿದೆ. ಬುಧವಾರ ಒಂದೇ ದಿನ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯಕ್ಕೆ ₹64,189 ಕೋಟಿ ಸೇರ್ಪಡೆಯಾಗಿದೆ.

ADVERTISEMENT

ಅದಾನಿ ಎನರ್ಜಿ ಸೆಲ್ಯೂಷನ್ಸ್‌ ಶೇ 11.60, ಅದಾನಿ ಟೋಟಲ್‌ ಗ್ಯಾಸ್ ಷೇರಿನ ಮೌಲ್ಯ ಶೇ 9.84ರಷ್ಟು ಹೆಚ್ಚಳವಾಗಿದೆ. ಅದಾನಿ ಗ್ರೀನ್‌ ಎನರ್ಜಿ ಶೇ 6, ಅದಾನಿ ಪವರ್‌ ಶೇ 4.99ರಷ್ಟು ಏರಿಕೆಯಾಗಿದೆ.

ಅದಾನಿ ವಿಲ್ಮಾರ್‌ ಶೇ 3.97, ಎನ್‌ಡಿಟಿವಿ ಶೇ 3.66, ಅದಾನಿ ಎಂಟರ್‌ಪ್ರೈಸಸ್‌ ಶೇ 2.45, ಅದಾನಿ ಪೋರ್ಟ್ಸ್ ಶೇ 1.39, ಅಂಬುಜಾ ಸಿಮೆಂಟ್ಸ್‌ ಶೇ 0.94, ಎಸಿಸಿ ಷೇರು ಶೇ 0.10ರಷ್ಟು ಏರಿಕೆ ದಾಖಲಿಸಿದೆ.

ಆರಂಭಿಕ ವಹಿವಾಟಿನಲ್ಲಿ ಅದಾನಿ ಎನರ್ಜಿ ಸೆಲ್ಯೂಷನ್ಸ್ ಶೇ 17.83, ಎನ್‌ಡಿಟಿವಿ ಶೇ 11.39, ಅದಾನಿ ಟೋಟಲ್‌ ಗ್ಯಾಸ್‌ ಶೇ 9.99, ಅದಾನಿ ಗ್ರೀನ್‌ ಎನರ್ಜಿ ಶೇ 9.13 ಹಾಗೂ ಅದಾನಿ ಎಂಟರ್‌ಪ್ರೈಸಸ್‌ ಷೇರು ಶೇ 9.11ರಷ್ಟು ಏರಿಕೆ ಕಂಡಿತ್ತು.

ಅದಾನಿ ಪೋರ್ಟ್ಸ್‌ ಹಾಗೂ ಅಂಬುಜಾ ಸಿಮೆಂಟ್ಸ್‌ 52 ವಾರಗಳ ಹಿಂದಿನ ಗರಿಷ್ಠ ಮಟ್ಟದಲ್ಲಿ ಏರಿಕೆ ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.