ADVERTISEMENT

ಹಿಂಡನ್‌ಬರ್ಗ್‌ ಆರೋಪ: ಅದಾನಿ ದೋಷಮುಕ್ತ; ಸೆಬಿ

ಪಿಟಿಐ
Published 18 ಸೆಪ್ಟೆಂಬರ್ 2025, 16:06 IST
Last Updated 18 ಸೆಪ್ಟೆಂಬರ್ 2025, 16:06 IST
ಗೌತಮ್ ಅದಾನಿ
ಗೌತಮ್ ಅದಾನಿ   

ನವದೆಹಲಿ: ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ನೇತೃತ್ವದ ಉದ್ಯಮ ಸಮೂಹವು ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರುವ ಕೆಲಸಗಳಲ್ಲಿ ತೊಡಗಿದ್ದ ಆರೋಪದಿಂದ ಮುಕ್ತವಾಗಿವೆ. ಅಮೆರಿಕದ ಹಿಂಡನ್‌ಬರ್ಗ್‌ ರಿಚರ್ಸ್‌ ಸಂಸ್ಥೆಯು ಈ ಆರೋಪ ಹೊರಿಸಿತ್ತು.

ಆರೋಪದ ಕುರಿತಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತನಿಖೆ ನಡೆಸಿತ್ತು. ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಸೆಬಿ ಹೇಳಿದೆ.

ವಿಸ್ತೃತ ತನಿಖೆ ನಡೆಸಲಾಗಿದೆ, ಕಂಪನಿಯ ಆಂತರಿಕ ಸಂಗತಿಗಳನ್ನು ಸಾರ್ವಜನಿಕರಿಗಿಂತ ಮೊದಲೇ ತಿಳಿದುಕೊಂಡು ಷೇರು ವಹಿವಾಟು ನಡೆಸಿದ್ದಕ್ಕೆ (ಇನ್‌ಸೈಡರ್ ಟ್ರೇಡಿಂಗ್), ಷೇರು ಬೆಲೆಯ ಮೇಲೆ ಕೃತಕವಾಗಿ ಪ್ರಭಾವ ಬೀರಿದ್ದಕ್ಕೆ ಹಾಗೂ ಸಾರ್ವಜನಿಕರು ಹೊಂದಿರಬೇಕಾದ ಷೇರುಗಳ ಪ್ರಮಾಣಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಸಾಕ್ಷ್ಯಗಳು ಇಲ್ಲ ಎಂದು ಎರಡು ಪ್ರತ್ಯೇಕ ಆದೇಶಗಳಲ್ಲಿ ಸೆಬಿ ಹೇಳಿದೆ.

ADVERTISEMENT

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಈಗ ಬಾಗಿಲು ಮುಚ್ಚಿದೆ. 2023ರ ಜನವರಿಯಲ್ಲಿ ವರದಿಯೊಂದನ್ನು ಪ್ರಕಟಿಸಿದ್ದ ಹಿಂಡನ್‌ಬರ್ಗ್‌ ಅದಾನಿ ಸಮೂಹದ ಮೇಲೆ ಹಲವು ಆರೋಪಗಳನ್ನು ಹೊರಿಸಿತ್ತು. ಆರೋಪಗಳು ಇರುವ ವರದಿ ಪ್ರಕಟವಾದ ನಂತರದಲ್ಲಿ ಸಮೂಹದ ಕಂಪನಿಗಳ ಷೇರುಮೌಲ್ಯವು ತೀವ್ರ ಕುಸಿತ ಕಂಡಿತ್ತು.

‘ಕ್ಷಮೆ ಕೇಳಲಿ’: ಹಿಂಡನ್‌ಬರ್ಗ್‌ ರಿಸರ್ಚ್‌ನ ‘ದುರುದ್ದೇಶದ’ ವರದಿಯನ್ನು ಬಳಸಿಕೊಂಡು ತಪ್ಪು ಸಂಕಥನಗಳನ್ನು ಹರಡಿದವರು ದೇಶದ ಮುಂದೆ ಕ್ಷಮೆ ಕೇಳಬೇಕು ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಹಿಂಡನ್‌ಬರ್ಗ್‌ನ ಆರೋಪಗಳು ನಿರಾಧಾರ ಎಂದು ಸಮೂಹವು ಯಾವಾಗಲೂ ಹೇಳುತ್ತ ಬಂದಿದ್ದನ್ನು ಸೆಬಿ ತನಿಖೆಯು ಸಾಬೀತು ಮಾಡಿದೆ ಎಂದು ಅದಾನಿ ಅವರು ಹೇಳಿದ್ದಾರೆ.

ದುರುದ್ದೇಶದ ಈ ವರದಿಯಿಂದಾಗಿ ನಷ್ಟ ಅನುಭವಿಸಿದ ಹೂಡಿಕೆದಾರರ ನೋವು ಅರ್ಥವಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.