ADVERTISEMENT

ಸೆಬಿ ಬಗ್ಗೆ ಸಂಶಯಿಸಲು ಆಧಾರ ಇಲ್ಲ: ತೀರ್ಪು ಕಾಯ್ದಿರಿಸಿದ ಕೋರ್ಟ್

ಅದಾನಿ–ಹಿಂಡನ್‌ಬರ್ಗ್‌ ವಿವಾದ ಕುರಿತ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್

ಪಿಟಿಐ
Published 24 ನವೆಂಬರ್ 2023, 15:58 IST
Last Updated 24 ನವೆಂಬರ್ 2023, 15:58 IST
ಸೆಬಿ
ಸೆಬಿ    

ನವದೆಹಲಿ: ಅದಾನಿ ಸಮೂಹದ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯನ್ನು (ಸೆಬಿ) ಸಂದೇಹದಿಂದ ಕಾಣಲು ಕಾರಣಗಳು ಇಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಸೆಬಿ ಕೈಗೊಂಡಿರುವ ಕ್ರಮಗಳನ್ನು ಅನುಮಾನದಿಂದ ನೋಡಲು ನ್ಯಾಯಾಲಯದ ಮುಂದೆ ಯಾವುದೇ ಆಧಾರ ಇಲ್ಲ. ಅಲ್ಲದೆ, ಹಿಂಡನ್‌ಬರ್ಗ್‌ ವರದಿಯಲ್ಲಿ ಇರುವುದನ್ನೆಲ್ಲ ತಾನು ನಿಜವೆಂದು ಭಾವಿಸಬೇಕಾಗಿಲ್ಲ ಎಂದು ಕೂಡ ಕೋರ್ಟ್‌ ಹೇಳಿದೆ.

ಷೇರುಪೇಟೆಯಲ್ಲಿನ ಅಸ್ಥಿರತೆಯಿಂದಾಗಿ ಅಥವಾ ಶಾರ್ಟ್‌ ಸೆಲ್ಲಿಂಗ್‌ನಿಂದಾಗಿ ಹೂಡಿಕೆದಾರರು ಹಣ ಕಳೆದುಕೊಳ್ಳದಂತೆ ನೋಡಿಕೊಳ್ಳಲು ಯಾವ ಕ್ರಮ ಕೈಗೊಳ್ಳಲು ಸೆಬಿ ಉದ್ದೇಶಿಸಿದೆ ಎಂದು ಪ್ರಶ್ನಿಸಿದೆ. ಸೂಕ್ತ ಆಧಾರಗಳು ಇಲ್ಲದೆ ತಾನು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದು ಸೂಕ್ತವಾಗುವುದಿಲ್ಲ ಎಂದು ಹೇಳಿದೆ.

ADVERTISEMENT

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕೆಲವು ಸಂಗತಿಗಳನ್ನು ಪರಮಸತ್ಯವೆಂದು ಭಾವಿಸಬೇಕು ಎಂದು ತಾನು ಶಾಸನಬದ್ಧ ನಿಯಂತ್ರಣ ಸಂಸ್ಥೆಯೊಂದಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಹೇಳಿದೆ. ಅದಾನಿ–ಹಿಂಡನ್‌ಬರ್ಗ್‌ ವಿವಾದಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ಕುರಿತ ತೀರ್ಪನ್ನು ಪೀಠವು ಕಾಯ್ದಿರಿಸಿದೆ.

‘ಹಿಂಡನ್‌ಬರ್ಗ್‌ ವರದಿಯಲ್ಲಿ ವಿವರಿಸಿರುವುದನ್ನು ನಾವು ನಿಜವೆಂದು ಭಾವಿಸಬೇಕಾಗಿಲ್ಲ. ಹೀಗಾಗಿಯೇ ನಾವು ತನಿಖೆ ನಡೆಸುವಂತೆ ಸೆಬಿಗೆ ಸೂಚಿಸಿದ್ದೆವು. ಏಕೆಂದರೆ, ವರದಿ ಸಿದ್ಧಪಡಿಸಿರುವ ಸಂಸ್ಥೆ ನಮ್ಮೆದುರು ಇಲ್ಲ ಹಾಗೂ ಅದು ಪ್ರಕಟಿಸಿರುವ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹೀಗಿರುವಾಗ, ವರದಿಯಲ್ಲಿನ ಅಂಶಗಳನ್ನು ಒಪ್ಪಿಕೊಳ್ಳುವುದು ನಿಜಕ್ಕೂ ನ್ಯಾಯಸಮ್ಮತ ಆಗುವುದಿಲ್ಲ’ ಎಂದು ಪೀಠವು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿ ಇದ್ದಾರೆ.

ಸೆಬಿ ನಡೆಸಿರುವ ತನಿಖೆಯು ವಿಶ್ವಾಸಾರ್ಹವೇ, ಸ್ವತಂತ್ರ ಸಂಸ್ಥೆಯೊಂದರಿಂದ ಅಥವಾ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕೇ ಎಂಬುದನ್ನು ಕೋರ್ಟ್‌ ಪರಿಶೀಲಿಸಬೇಕು ಎಂದು ಭೂಷಣ್ ಹೇಳಿದರು. ‘ಸೆಬಿಯ ಕೆಲಸವನ್ನು ಅನುಮಾನದಿಂದ ಕಾಣಲು ಯಾವ ಆಧಾರ ಇದೆ’ ಎಂದು ಪೀಠ ಪ್ರಶ್ನಿಸಿತು.

ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ತಜ್ಞರ ಸಮಿತಿಯ ಇಬ್ಬರು ಸದಸ್ಯರು ಹಿತಾಸಕ್ತಿ ಸಂಘರ್ಷ ಹೊಂದಿದ್ದಾರೆ ಎಂದು ಭೂಷಣ್ ಅವರ ಹೇಳಿಕೆಗೆ ಪೀಠವು ಆಕ್ಷೇಪ ವ್ಯಕ್ತಪಡಿಸಿತು. ‘ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಆರೋಪ ಮಾಡುವುದು ಬಹಳ ಸುಲಭ. ನಾವು ಇಲ್ಲಿ ನಡತೆ ಪ್ರಮಾಣಪತ್ರ ನೀಡಲು ಕುಳಿತಿಲ್ಲ. ನ್ಯಾಯೋಚಿತವಾಗಿರುವುದಕ್ಕೆ ಸಂಬಂಧಿಸಿದ ಮೂಲ ತತ್ವಗಳು ನಮಗೆ ಅರಿವಿರಬೇಕು’ ಎಂದು ಪೀಠ ಭೂಷಣ್ ಅವರಿಗೆ ಹೇಳಿತು.

ಸೆಬಿ ತನಿಖೆಯು ವಿಶ್ವಾಸಾರ್ಹ ಆಗಿಲ್ಲ ಎಂಬ ತಮ್ಮ ವಾದಕ್ಕೆ ಪೂರಕವಾಗಿ ಭೂಷಣ್ ಅವರು ಹಿಂಡನ್‌ಬರ್ಗ್‌ನ ವರದಿ ಹಾಗೂ ಕೆಲವು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದರು. ‘ಗಾರ್ಡಿಯನ್ ಆಗಿರಲಿ, ಫೈನಾನ್ಶಿಯಲ್‌ ಟೈಮ್ಸ್ ಆಗಿರಲಿ, ಪತ್ರಿಕೆಯೊಂದರಲ್ಲಿ ಬಂದಿರುವ ಯಾವುದೋ ಒಂದು ಸಂಗತಿಯನ್ನು ಪರಮಸತ್ಯವೆಂದು ಭಾವಿಸಬೇಕು ಎಂದು ನಾವು ಶಾಸನಬದ್ಧ ನಿಯಂತ್ರಣ ಸಂಸ್ಥೆಯೊಂದಕ್ಕೆ ಸೂಚಿಸಲು ಆಗದು. ಸೆಬಿ ಬಗ್ಗೆ ಸಂಶಯಪಡಲು ನಮ್ಮಲ್ಲಿ ಆಧಾರಗಳಿಲ್ಲ...’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.