ಎನ್. ಚಂದ್ರಶೇಖರನ್
–ಪಿಟಿಐ ಚಿತ್ರ
ನವದೆಹಲಿ: ಭಾರತ ಇಂದು ಪರಿವರ್ತನೆಯ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಸರಿಯಾಗಿ ಬಳಸಿಕೊಳ್ಳಲು ಅದ್ಭುತ ಅವಕಾಶ ಇದೆ ಎಂದು ಟಾಟಾ ಸನ್ಸ್ ಚೇರ್‌ಮನ್ ಎನ್. ಚಂದ್ರಶೇಖರನ್ ಹೇಳಿದರು.
ನೀತಿ ಆಯೋಗ ಆಯೋಜಿಸಿದ್ದ 'AI for Viksit Bharat: The Opportunity for Accelerated Economic Growth' ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ವರದಿ ಬಿಡುಗಡೆ ಮಾಡಿ ಮಾತನಾಡಿದರು.
ಎಐ ಬಳಸಿಕೊಂಡು ಭಾರತದಲ್ಲಿ ಅದ್ಭುತ ಬದಲಾವಣೆ ತರಲು ಸದಾವಕಾಶ ಒದಗಿ ಬಂದಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪೃವೃತ್ತರಾಗಬೇಕು ಎಂದು ಹೇಳಿದರು.
ಎಐ ಬಳಸಿಕೊಂಡು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಹುಟ್ಟಿಹಾಕಬಹುದಾಗಿದೆ ಎಂದು ಅವರು ಪ್ರತಿಪಾದಿಸಿದರು.
ದೇಶದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಆರೋಗ್ಯ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರವನ್ನು ಎಐ ಬಳಸಿಕೊಂಡು ಸಬಲೀಕರಣಗೊಳಿಸಬಹುದು. ಎಐನಿಂದ ಅಸಮಾನತೆಗಳನ್ನು ತೊಡೆದು ಹಾಕಿ ದೇಶ ಕಟ್ಟಬಹುದು ಎಂದು ಹೇಳಿದರು.
ಈ ರೀತಿಯ ಬದಲಾವಣೆಗಳನ್ನು ತರಬೇಕಾದರೆ ಮುಖ್ಯವಾಗಿ ಸರ್ಕಾರಗಳು, ತಂತ್ರಜ್ಞಾನ ಜಗತ್ತು ಹಾಗೂ ಸಮಾಜ ಒಟ್ಟಾಗಿ ಪರಸ್ಪರ ಸ್ಪಂದಿಸುತ್ತಾ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.