ಅಹಮದಾಬಾದ್: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ವಿಮಾ ಕ್ಲೇಮ್‌ಗಳನ್ನು ಇತ್ಯರ್ಥಪಡಿಸುವ ವಿಚಾರದಲ್ಲಿ ವಿಮಾ ಕಂಪನಿಗಳಿಗೆ ಹೊಸ ಸಮಸ್ಯೆಗಳು ಎದುರಾಗಿವೆ.
ವಿಮಾ ಪಾಲಿಸಿ ಹೊಂದಿದ್ದವರಷ್ಟೇ ಅಲ್ಲದೆ ಅವರು ನಾಮನಿರ್ದೇಶನ ಮಾಡಿದ್ದವರು ಕೂಡ ಮೃತಪಟ್ಟಿರುವುದು ಕಂಪನಿಗಳಿಗೆ ಸಮಸ್ಯೆ ತಂದಿತ್ತಿದೆ. ದುರಂತದಲ್ಲಿ ಇಡೀ ಕುಟುಂಬ ಜೀವ ಕಳೆದುಕೊಂಡ ನಿದರ್ಶನವೂ ಇದೆ.
ಮೃತ ಪ್ರಯಾಣಿಕರಿಗೆ ಹಾಗೂ ವಿಮಾನವು ಅಪ್ಪಳಿಸಿದ ಕಟ್ಟಡದಲ್ಲಿ ಇದ್ದು ಜೀವ ಕಳೆದುಕೊಂಡವರಿಗೆ ವಿಮಾ ಸೌಲಭ್ಯ ನೀಡುವಲ್ಲಿ ವಿಳಂಬ ಆಗಬಾರದು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಎಡಿಎಐ) ಹೇಳಿದೆ.
ಇದರ ಅನ್ವಯ, ದೇಶದ ಪ್ರಮುಖ ವಿಮಾ ಕಂಪನಿಗಳು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಸಹಾಯಕೇಂದ್ರ ಆರಂಭಿಸಿವೆ.
ವಿಮೆ ಪಡೆದ ವ್ಯಕ್ತಿಯು ತಮ್ಮ ಸಂಗಾತಿಯನ್ನು ನಾಮನಿರ್ದೇಶನ ಮಾಡಿದ್ದರು. ಆದರೆ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಎಲ್‌ಐಸಿ ಅಧಿಕಾರಿ ಆಶಿಷ್ ಶುಕ್ಲಾ ತಿಳಿಸಿದ್ದಾರೆ.
ಕಂಪನಿಯೊಂದರ ನಿರ್ದೇಶಕ ಹಾಗೂ ಅವರು ನಾಮನಿರ್ದೇಶನ ಮಾಡಿದ್ದ ಪತ್ನಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಇಫ್ಕೊ ಟೋಕಿಯೊ ವಿಮಾ ಕಂಪನಿಯ ಅಧಿಕಾರಿ ಮನ್‌ಪ್ರೀತ್ ಸಿಂಗ್ ಸಭರ್ವಾಲ್ ಹೇಳಿದ್ದಾರೆ. ಇದೇ ಬಗೆಯ ಪರಿಸ್ಥಿತಿಯು ಟಾಟಾ ಎಐಎ ವಿಮಾ ಕಂಪನಿಗೂ ಎದುರಾಗಿದೆ.
ವಿಮೆ ಖರೀದಿಸಿರುವ ವ್ಯಕ್ತಿ ಹಾಗೂ ನಾಮನಿರ್ದೇಶನ ಆಗಿರುವ ವ್ಯಕ್ತಿ ಮೃತಪಟ್ಟಾಗ ಕ್ಲೇಮ್ ಇತ್ಯರ್ಥಪಡಿಸುವುದು ಕಷ್ಟವಾಗುತ್ತದೆ ಎಂದು ಕಂಪನಿಗಳ ಪ್ರತಿನಿಧಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.