ADVERTISEMENT

ಎ.ಐ ಪರಿಕರದಿಂದ ಶೇ 50ರಷ್ಟು ಪ್ರಕರಣ ಇತ್ಯರ್ಥ: ಸೇ‌ಲ್ಸ್‌ಫೋರ್ಸ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 15:52 IST
Last Updated 12 ನವೆಂಬರ್ 2025, 15:52 IST
   

ಬೆಂಗಳೂರು: 2027ರ ವೇಳೆಗೆ ದೇಶದ ಸೇವಾ ವಲಯದಲ್ಲಿ ಗ್ರಾಹಕರಿಂದ ಬರುವ ಕೋರಿಕೆಗಳ ಪೈಕಿ ಶೇ 50ರಷ್ಟಕ್ಕೆ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಪರಿಕರಗಳೇ ಪರಿಹಾರ ನೀಡಲಿವೆ ಎಂದು ಸೇಲ್ಸ್‌ಫೋರ್ಸ್‌ ಸಮೀಕ್ಷೆ ಹೇಳಿದೆ.

ಅಮೆರಿಕ ಮೂಲದ ಸೇಲ್ಸ್‌ಫೋರ್ಸ್‌ ಕಂಪನಿಯು ಕ್ಲೌಡ್ ಆಧಾರಿತ ತಂತ್ರಾಂಶ ಸೇವೆಗಳನ್ನು ಒದಗಿಸುತ್ತದೆ.

ಸೇವಾ ವಲಯದ ತಜ್ಞರ ಪ್ರಕಾರ, ಗ್ರಾಹಕರಿಂದ ಈಗ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಬರುತ್ತಿರುವ ಕೋರಿಕೆಗಳ ಪೈಕಿ ಶೇ 30ರಷ್ಟನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪರಿಹರಿಸುತ್ತಿದೆ. ಇದು 2027ರ ವೇಳೆಗೆ ಶೇ 50ಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಸೇಲ್ಸ್‌ಫೋರ್ಸ್‌ ತನ್ನ ಇತ್ತೀಚಿನ ವರದಿಯೊಂದರಲ್ಲಿ ತಿಳಿಸಿದೆ.

ADVERTISEMENT

‘ಎ.ಐ ತಂತ್ರಜ್ಞಾನದ ಬಳಕೆಯಿಂದ ಸೇವಾ ವೆಚ್ಚವು ಕಡಿತಗೊಂಡಿದ್ದು, ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಸುಧಾರಣೆ ಆಗಿದೆ’ ಎಂದು ಸೇಲ್ಸ್‌ಫೋರ್ಸ್ ಇಂಡಿಯಾದ ಸಲ್ಯೂಷನ್ ಎಂಜಿನಿಯರಿಂಗ್ ಉಪಾಧ್ಯಕ್ಷ ದೀಪು ಚಾಕೊ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸೇವಾ ವಲಯದ ಕಂಪನಿಗಳು, ಈ ತಂತ್ರಜ್ಞಾನ ಬಳಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಈ ತಂತ್ರಜ್ಞಾನದ ಬಳಕೆಯಿಂದ ವರಮಾನವು ಶೇ 16ರಷ್ಟು ಹೆಚ್ಚಳವಾಗಲಿದೆ ಎಂದು ದೇಶದ ಸೇವಾ ವಲಯದ ಕಂಪನಿಗಳು ಭಾವಿಸಿವೆ’ ಎಂದು ಸೇಲ್ಸ್‌ಫೋರ್ಸ್ ಇಂಡಿಯಾದ ಮಾರಾಟ ಮತ್ತು ವಿತರಣೆಯ ವ್ಯವಸ್ಥಾಪಕ ನಿರ್ದೇಶಕಿ ಮನ್ಕಿರಣ್ ಚೌಹಾನ್ ತಿಳಿಸಿದರು.

ಈ ವರ್ಷದ ಏಪ್ರಿಲ್‌ 25ರಿಂದ ಜೂನ್‌ 6ರವರೆಗೆ ಜಗತ್ತಿನ 6,500 ಕಂಪನಿಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಈ ವರದಿ ತಯಾರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.