ಮುಂಬೈ: ದೆಹಲಿ ಮತ್ತು ವಾಷಿಂಗ್ಟನ್ ಡಿ.ಸಿ. ನಡುವಿನ ಸೇವೆಗಳನ್ನು ಸೆಪ್ಟೆಂಬರ್ 1ರಿಂದ ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಸೋಮವಾರ ಘೋಷಿಸಿದೆ.
ವಿಮಾನಯಾನದ ಒಟ್ಟಾರೆ ಮಾರ್ಗಗಳ ವಿಶ್ವಾಸಾರ್ಹತೆ ಮತ್ತು ಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಏರ್ ಇಂಡಿಯಾ ತನ್ನ 26 ಬೋಯಿಂಗ್ 787-8 ವಿಮಾನಗಳನ್ನು ಗ್ರಾಹಕರ ಅನುಭವ ಸುಧಾರಣೆಗಾಗಿ ನವೀಕರಣ (ರಿಟ್ರೊಫಿಟ್) ಮಾಡುತ್ತಿದೆ. ಇದರಿಂದ 2026ರ ಅಂತ್ಯದವರೆಗೆ ಹಲವು ವಿಮಾನಗಳು ಲಭ್ಯವಿರುವುದಿಲ್ಲ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ವಾಯುಪ್ರದೇಶ ಮುಚ್ಚಿರುವುದರಿಂದ ಏರ್ ಇಂಡಿಯಾದ ದೂರ ಹಾರಾಟದ ವಿಮಾನ ಸೇವೆಗಳು ತೊಂದರೆಗೊಳಗಾಗಿವೆ ಎಂದಿದ್ದಾರೆ.
ಸೆಪ್ಟೆಂಬರ್ 1ರ ನಂತರ ವಾಷಿಂಗ್ಟನ್ ಡಿ.ಸಿ.ಗೆ ಅಥವಾ ಅಲ್ಲಿಂದ ಏರ್ ಇಂಡಿಯಾ ವಿಮಾನದ ಟಿಕೆಟ್ ಬುಕ್ ಮಾಡಿರುವ ಗ್ರಾಹಕರನ್ನು ಸಂಪರ್ಕಿಸಿ, ಬೇರೆ ವಿಮಾನಗಳಲ್ಲಿ ಮರು-ಬುಕ್ ಮಾಡಿಕೊಡಲಾಗುವುದು ಅಥವಾ ಪೂರ್ಣ ಮರುಪಾವತಿಯಂತಹ ಪರ್ಯಾಯ ಆಯ್ಕೆಗಳನ್ನು ಅವರ ಆದ್ಯತೆಗೆ ತಕ್ಕಂತೆ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.