ಬೆಂಗಳೂರು: ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿ ಸ್ಥಾನ ಹೊಂದಿರುವ ಏರ್‌ಬಸ್ ಕಂಪನಿಯು ಭಾರತದ ‘ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್’ (ಟಿಎಎಸ್‌ಎಲ್) ಜೊತೆಗೂಡಿ ಕೋಲಾರದ ವೇಮಗಲ್‌ನಲ್ಲಿ ಹೆಲಿಕಾಪ್ಟರ್ ಜೋಡಣಾ ಘಟಕವನ್ನು ಸ್ಥಾಪಿಸಲಿದೆ.
ಇದು ದೇಶದಲ್ಲಿ ಖಾಸಗಿ ವಲಯದಿಂದ ಸ್ಥಾಪನೆ ಆಗುತ್ತಿರುವ ಹೆಲಿಕಾಪ್ಟರ್ ಜೋಡಣೆಯ ಮೊದಲ ಘಟಕ ಎಂದು ಏರ್‌ಬಸ್ ಹಾಗೂ ಟಿಎಎಸ್‌ಎಲ್‌ನ ಜಂಟಿ ಪ್ರಕಟಣೆ ತಿಳಿಸಿದೆ.
‘ಈ ಯೋಜನೆಯು ಆತ್ಮನಿರ್ಭರ ಭಾರತ ಕಾರ್ಯಕ್ರಮಕ್ಕೆ ಗಣನೀಯ ಪ್ರಮಾಣದಲ್ಲಿ ಶಕ್ತಿ ತುಂಬಲಿದೆ. ಈ ಘಟಕದಲ್ಲಿ ಏರ್‌ಬಸ್‌ನ ಎಚ್125 ಹೆಲಿಕಾಪ್ಟರ್‌ಗಳಿಗೆ ಅಂತಿಮ ರೂಪ ನೀಡಲಾಗುತ್ತದೆ. ಈ ಮಹತ್ವದ ಒಪ್ಪಂದವು ಭಾರತವನ್ನು ಹೆಲಿಕಾಪ್ಟರ್‌ಗಳ ಬಳಕೆದಾರನ ಸ್ಥಾನದಿಂದ ಅವುಗಳ ಉತ್ಪಾದಕನ ಸ್ಥಾನಕ್ಕೆ ಏರಿಸಲಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಭಾರತದಲ್ಲೇ ತಯಾರಾಗುವ ಮೊದಲ ಎಚ್125 ಹೆಲಿಕಾಪ್ಟರ್ 2027ರ ಆರಂಭದಲ್ಲಿ ಸಿದ್ಧವಾಗುವ ನಿರೀಕ್ಷೆ ಇದೆ. ಈ ಘಟಕದಲ್ಲಿ ನಿರ್ಮಾಣವಾಗುವ ಹೆಲಿಕಾಪ್ಟರ್‌ಗಳನ್ನು ನಾಗರಿಕ ಬಳಕೆಗೆ ಮಾತ್ರವಲ್ಲದೆ, ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ ಮತ್ತು ಕಾನೂನು ಪಾಲನೆಯಂತಹ ಕ್ಷೇತ್ರಗಳಲ್ಲಿಯೂ ಬಳಸಲು ಉದ್ದೇಶಿಸಲಾಗಿದೆ. ಎಚ್125ಎಂ ಎಂಬ ಮಿಲಿಟರಿ ಬಳಕೆಯ ಹೆಲಿಕಾಪ್ಟರ್‌ಗಳನ್ನೂ ಇಲ್ಲಿಯೇ ತಯಾರಿಸಲಾಗುತ್ತದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.