ADVERTISEMENT

ಏರ್‌ಟೆಲ್‌ನಿಂದ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ ಲಭ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:19 IST
Last Updated 23 ಏಪ್ರಿಲ್ 2024, 14:19 IST
   

ಬೆಂಗಳೂರು: ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಯಾದ ಭಾರ್ತಿ ಏರ್‌ಟೆಲ್‌, ವಿದೇಶಕ್ಕೆ ಪ್ರಯಾಣಿಸುವ ತನ್ನ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ ಅನ್ನು ಬಿಡುಗಡೆಗೊಳಿಸಿದೆ.

ಈ ಹೊಸ ಪ್ಯಾಕ್‌ ಅನ್ನು 184 ದೇಶಗಳಲ್ಲಿ ಬಳಸಬಹುದಾಗಿದೆ.  ಪ್ರತಿ ದಿನಕ್ಕೆ ₹133ರಂತೆ ಶುಲ್ಕ ಆರಂಭವಾಗಲಿದೆ. ಇತರೆ ದೇಶಗಳ ಸ್ಥಳೀಯ ಸಿಮ್‌ಗಳಿಗೆ ಹೋಲಿಸಿದರೆ ಇದು ಅಗ್ಗವಾಗಿದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರು ವಿದೇಶದಲ್ಲಿ ಕಾಲಿಟ್ಟ ಕೂಡಲೇ ಸೇವೆಗಳನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಬಹುದಾಗಿದ್ದು, ಅನಿಯಮಿತ ಡೇಟಾ, ಫೋನ್‌ ಕರೆಯ ಲಾಭ ಪಡೆಯಬಹುದಾಗಿದೆ. ಅಲ್ಲದೆ, 24x7 ಗ್ರಾಹಕ ಸಹಾಯವಾಣಿ ಸೇವೆಗಳ ಜೊತೆಗೆ ವಿಮಾನದೊಳಗೆ ಸಂಪರ್ಕವನ್ನು ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ತಮ್ಮ ಪ್ರಯಾಣದ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಒಂದೇ ಪ್ಯಾಕ್‌ನೊಂದಿಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಸಂಪರ್ಕವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.

‘ಗ್ರಾಹಕರ ಸಮಸ್ಯೆ ನಿವಾರಿಸುವುದು ಮತ್ತು ಅತ್ಯುತ್ತಮ ಸೌಲಭ್ಯ ಒದಗಿಸುವುದು ಕಂಪನಿಯ ಮುಖ್ಯ ಗುರಿಯಾಗಿದೆ. ಜಗತ್ತಿನ ಯಾವುದೇ ಮೂಲೆಗೆ ಪ್ರಯಾಣಿಸಲು ಬಯಸುವ ನಮ್ಮ ಗ್ರಾಹಕರಿಗಾಗಿ ಸಾಟಿಯಿಲ್ಲದ ರೋಮಿಂಗ್ ಸೇವೆಯನ್ನು ಅಗ್ಗದ ದರದಲ್ಲಿ ನೀಡಲಾಗುತ್ತಿದೆ’ ಎಂದು ಕಂಪನಿಯ ಗ್ರಾಹಕ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಅಮಿತ್ ತ್ರಿಪಾಠಿ ತಿಳಿಸಿದ್ದಾರೆ.

‘ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ಗಳನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಈ ಪ್ಯಾಕ್‌ಗಳು ವಿವಿಧ ದೇಶಗಳಲ್ಲಿ ಸಿಗುವ ದೇಶೀಯ ಸಿಮ್‌ಗಳಿಗೆ ಹೋಲಿಸಿದರೆ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿವೆ. ಹೆಚ್ಚಿನ ಲಾಭದೊಂದಿಗೆ ಅತ್ಯುತ್ತಮ ಮೌಲ್ಯವನ್ನೂ ಒದಗಿಸುತ್ತವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.