ನವದೆಹಲಿ (ಪಿಟಿಐ): ಆಕಾಸಾ ಏರ್ ಕಂಪನಿಯು ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ತಿಂಗಳಿನಲ್ಲಿ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಈ ಕಂಪನಿಯು, ವಿಮಾನಯಾನವು ಇನ್ನಷ್ಟು ಜನರ ಕೈಗೆ ಎಟಕುವಂತೆ ಮಾಡುವ ಉದ್ದೇಶ ಹೊಂದಿದೆ. ಕಂಪನಿಯು ಏಪ್ರಿಲ್ ತಿಂಗಳಲ್ಲಿ ಬೋಯಿಂಗ್ 737 ಎಂಎಎಕ್ಸ್ ವಿಮಾನಗಳನ್ನು ಪಡೆಯುವ ನಿರೀಕ್ಷೆ ಹೊಂದಿದೆ.
ದೇಶದಲ್ಲಿ ದೀರ್ಘಾವಧಿಯಲ್ಲಿ ನಾಗರಿಕ ವಿಮಾನಯಾನ ಉದ್ದಿಮೆಯು ಒಳ್ಳೆಯ ಬೆಳವಣಿಗೆ ಕಾಣಲಿದೆ ಎನ್ನುವ ನಂಬಿಕೆ ಕಂಪನಿಯದ್ದು. ಖ್ಯಾತ ಹೂಡಿಕೆದಾರ ರಾಕೇಶ್ ಜುಂಝನ್‌ವಾಲಾ ಅವರೂ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, 2023ರ ಮಾರ್ಚ್ ವೇಳೆಗೆ ಒಟ್ಟು 18 ವಿಮಾನಗಳನ್ನು ಹೊಂದುವ ಗುರಿಯನ್ನು ಕಂಪನಿ ಇರಿಸಿಕೊಂಡಿದೆ.
ವಿಮಾನಯಾನ ಕ್ಷೇತ್ರದಲ್ಲಿ ಭಾರತದ ಪಾಲು ಜಾಸ್ತಿ ಆಗುತ್ತಿದೆ. ಕೋವಿಡ್‌ನಿಂದ ಈಗ ಎದುರಾಗಿಸುವ ಸಮಸ್ಯೆಗಳು ತಾತ್ಕಾಲಿಕ ಎಂದು ಕಂಪನಿಯ ಸಿಇಒ ವಿನಯ್ ದುಬೆ ಹೇಳಿದ್ದಾರೆ. ಕಡಿಮೆ ವೆಚ್ಚದಲ್ಲಿ ವಿಮಾನಯಾನ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಆಕಾಸಾ ಏರ್ ಹೊಂದಿದೆ. ‘ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ವಿಮಾನ ಪ್ರಯಾಣದ ಅನುಭವ ಹೊಂದಿರುವವರ ಸಂಖ್ಯೆ ಕಡಿಮೆ. ಇದು ನಾವು ನಾಗರಿಕ ವಿಮಾನಯಾನ ಕ್ಷೇತ್ರದ ವಿಚಾರವಾಗಿ ಆಶಾವಾದ ಹೊಂದಿರಲು ಮುಖ್ಯ ಕಾರಣ. ಈಗಿರುವ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಲಿದೆ. ಆ ಬದಲಾವಣೆಯನ್ನು ಸಾಧ್ಯವಾಗಿಸಲು ನಮ್ಮದು ಕೊಡುಗೆ ಇರಲಿದೆ. ವಿಮಾನ ಯಾನವು ಎಲ್ಲರಿಗೂ ಸಿಗುವಂತೆ ಮಾಡುವುದು ನಮ್ಮ ಬಯಕೆ’ ಎಂದು ಕೂಡ ದುಬೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
2023ರ ದ್ವಿತೀಯಾರ್ಧದಲ್ಲಿ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕೂಡ ವಿಮಾನಯಾನ ಸೇವೆ ಒದಗಿಸುವ ಉದ್ದೇಶ ಕಂಪನಿಯದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.