ADVERTISEMENT

ಅಂಬಾನಿ ಮಗನ ಮದುವೆ: ಸಿನಿ ತಾರೆಯರು, ಉದ್ಯಮ ದಿಗ್ಗಜರು ಭಾಗಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 16:04 IST
Last Updated 25 ಫೆಬ್ರುವರಿ 2024, 16:04 IST
ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌
ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌    

ನವದೆಹಲಿ: ಉದ್ಯಮಿ ಮುಕೇಶ್‌ ಅಂಬಾನಿ ಅವರು ಕಿರಿಯ ಮಗ ಅನಂತ್‌ ಅಂಬಾನಿ ಹಾಗೂ ಎನ್‌ಕೋರ್‌ ಹೆಲ್ತ್‌ಕೇರ್‌ನ ಸಿಇಒ ವಿರೇನ್‌ ಮರ್ಚೆಂಟ್‌ ಹಾಗೂ ಉದ್ಯಮಿ ಶೈಲಾ ಮರ್ಚೆಂಟ್‌ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್‌ ಅವರ ವಿವಾಹವು ಇದೇ ವರ್ಷದ ಜುಲೈನಲ್ಲಿ ನಡೆಯಲಿದೆ. ಮದುವೆಪೂರ್ವ ಕಾರ್ಯಕ್ರಮಗಳು ಮಾರ್ಚ್‌ 1ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಜಗತ್ತಿನಾದ್ಯಂತದಿಂದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.

ಭಾರತದ ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ, ಸುನೀಲ್‌ ಭಾರ್ತಿ ಮಿತ್ತಲ್‌, ಬಾಲಿವುಡ್‌ನ ಅಮಿತಾಬ್‌ ಬಚ್ಚನ್‌ ಹಾಗೂ ಶಾರುಕ್‌ ಖಾನ್‌, ಕ್ರಿಕೆಟ್‌ನ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹಾಗೂ ಎಂ.ಎಸ್‌.ಧೋನಿ, ಮೆಟಾದ ಸಿಇಒ ಮಾರ್ಕ್‌ ಜುಕನ್‌ಬರ್ಗ್‌ ಸೇರಿದಂತೆ ನೂರಾರು ಮಂದಿ ಗಣ್ಯರು ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಹಾಲಿವುಡ್‌ನ ಖ್ಯಾತ ಪಾಪ್‌ ಗಾಯಕಿ ರಿಹಾನಾ ಅವರು ಗಣ್ಯರನ್ನು ತಮ್ಮ ಗಾಯನದ ಮೂಲಕ ಸ್ವಾಗತಿಸಲಿದ್ದಾರೆ. ಭಾರತದ ಗಾಯಕ ದಿಲ್‌ಜೀತ್‌ ದೋಸಂಡಾ ಹಾಗೂ ಇತರರು ರಿಹಾನಾ ಅವರಿಗೆ ಜೊತೆಯಾಗಲಿದ್ದಾರೆ.

ADVERTISEMENT

ಹೇಗಿದೆ ತಯಾರಿ?

ಗಣ್ಯರಿಗೆ ಉಳಿದುಕೊಳ್ಳಲು ಜಾಮ್‌ನಗರದಲ್ಲಿ ಹೆಚ್ಚಿನ ವ್ಯವಸ್ಥೆಗಳಿಲ್ಲ. ಅಲ್ಲಿ ಐರಾಷಾಮಿ ಹೋಟೆಲ್‌ಗಳೂ ಇಲ್ಲ. ಆದ್ದರಿಂದ, ಗಣ್ಯರಿಗೆ ತಂಗಲು ಐಷಾರಾಮಿ ಟೆಂಟ್‌ಗಳನ್ನು ನಿರ್ಮಾಣ ಮಾಡಲಿದೆ. ಈ ಟೆಂಟ್‌ಗಳು ಐಷಾರಾಮಿ ಬಾತ್‌ರೂಮ್‌ಗಳನ್ನು ಒಳಗೊಂಡಿವೆ. ದೆಹಲಿ ಹಾಗೂ ಮುಂಬೈನಿಂದ ಬರುವ ಗಣ್ಯರಿಗೆ ಜಾಮ್‌ನಗರಕ್ಕೆ ಬರಲು ವಿಮಾನ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ, ಗಣ್ಯರನ್ನು ವಾಪಸ್‌ ದೆಹಲಿ ಹಾಗೂ ಮುಂಬೈಗೆ ಕಳುಹಿಸಿಕೊಡುವ ಅನುಕೂಲತೆಯನ್ನೂ ಮಾಡಿಕೊಡಲಾಗಿದೆ.

ಏನೇನು ಕಾರ್ಯಕ್ರಮ?

ಮೂರು ದಿನಗಳ ಕಾರ್ಯಕ್ರಮಗಳು ಮೂರು ಪರಿಕಲ್ಪನೆಗಳಲ್ಲಿ (ಥೀಮ್‌) ನಡೆಯಲಿದೆ. ‘ಕಾರ್ಯಕ್ರಮಗಳ ಮಾರ್ಗಸೂಚಿ’ಯನ್ನು ಗಣ್ಯರಿಗೆ ಈಗಾಗಲೇ ಕಳುಹಿಸಿ ಕೊಡಲಾಗಿದೆ. 

‘ಆನ್‌ ಇವನಿಂಗ್‌ ಇನ್‌ ಎವರ್‌ಲ್ಯಾಂಡ್‌’– ಇದು ಮೊದಲ ದಿನ ಥೀಮ್‌. ಈ ಕಾರ್ಯಕ್ರಮದಲ್ಲಿ ಅಥಿತಿಗಳು ಕಾಕ್‌ಲೈಟ್‌ ದಿರಿಸುಗಳನ್ನು ತೊಡಬೇಕಿದೆ. ‘ಎ ವಾಕ್‌ ಆನ್‌ ದಿ ವೈಲ್ಡ್‌ಸೈಡ್‌’– ಇದು ಎರಡನೇ ದಿನದ ಕಾರ್ಯಕ್ರಮ. ‘ಅರಣ್ಯ’ ಪರಿಕಲ್ಪನೆಗೆ ತಕ್ಕಂತೆ ಉಡುಗೆಗಳನ್ನು ಗಣ್ಯರು ತೊಡಬೇಕಿದೆ. ಅಂಬಾನಿ ಅವರ ಪ್ರಾಣಿ ಸಂರಕ್ಷಣೆ ಕೇಂದ್ರದ ಆವರಣದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ. ಎರಡನೇ ದಿನದ ಕಾರ್ಯಕ್ರಮದ ನಂತರ, ಅತಿಥಿಗಳು ‘ಮೇಳಾ ರೋಗ್‌’ಗೆ ತೆರಳಬೇಕಿದೆ. ಅಲ್ಲಿ ಭಾರತದ ದೇಶಿ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಇದಕ್ಕೆ ಗಣ್ಯರು ದಕ್ಷಿಣ ಏಪ್ಯಾದ ಭಾಗದ ಉಡುಪುಗಳನ್ನು ತೊಡಬೇಕಿದೆ.

‘ಟಸ್ಕರ್‌ ಟೇಲ್ಸ್‌’ ಮತ್ತು ‘ಹಸ್ತಾಕ್ಷರ್‌’ – ಇವು ಮೂರನೇ ದಿನದ ಚಟುವಟಿಕೆಗಳು. ಟಸ್ಕರ್‌ ಟೇಲ್ಸ್‌ನಲ್ಲಿ ಅತಿಥಿಗಳು ಜಾಮ್‌ನಗರದ ಸೌಂದರ್ಯವನ್ನು ಸವಿಯಲಿದ್ದಾರೆ. ಇದಾದ ಬಳಿಕ ಕೊನೆಯ ಕಾರ್ಯಕ್ರಮದ ಅಂಗವಾಗಿ ಎಲ್ಲ ಗಣ್ಯರು ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸಲಿದ್ದಾರೆ. ಎಲ್ಲ ಅತಿಥಿಗಳಿಗೂ ಥೀಮ್‌ಗೆ ತಕ್ಕ ಉಡುಪಿನ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಯಾರು ಯಾರು ಬರಲಿದ್ದಾರೆ?

ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ಅಲ್ಫಬೆಟ್‌ ಸಿಇಒ ಸುಂದರ್‌ ಪಿಚ್ಚೈ, ಅಡೋಬ್‌ ಸಿಇಒ ಶಾಂತನು ನಾರಾಯನ್‌, ವಾಲ್ಟ್‌ ಡೆಸ್ನಿ ಸಿಇಒ ಬೊಬ್‌ ಐಗರ್‌, ಬ್ಲಾಕ್‌ರಾಕ್ ಸಿಇಒ ಲ್ಯಾರಿ ಫಿನ್ಕ್‌, ಅಡನೊಕ್‌ ಸಿಇಒ ಸುಲ್ತಾನ್‌ ಅಹಮದ್‌ ಅಲ್‌ ಜಬೈರ್‌ ಅವರುಗಳು ವಿದೇಶದ ಉದ್ಯಮ ಕ್ಷೇತ್ರದಿಂದ ಆಗಮಿಸಲಿದ್ದಾರೆ.

ಭಾರತದ ಉದ್ಯಮಿಗಳಾದ ಟಾಟಾ ಸನ್ಸ್‌ ಅಧ್ಯಕ್ಷ ನಟರಾಜನ್‌ ಚಂದ್ರಶೇಖರನ್‌, ಆದಿತ್ಯಾ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್‌ ಮಂಗಲಂ ಬಿರ್ಗಾ ಮತ್ತು ಕುಟುಂಬ, ಗಾಡರೇಜ್‌ ಕುಟುಂಬ, ಇನ್ಫೋಸಿಸ್‌ ಅಧ್ಯಕ್ಷ ನಂದನ್‌ ನೀಲೇಕಣಿ, ವಿಪ್ರೊದ ರಿಶದ್‌ ಪ್ರೇಮ್‌ಜಿ, ಸೆರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಪೂನಂವಾಲಾ ಸೇರಿದಂತೆ ಇತತರು ಆಗಮಿಸಲಿದ್ದಾರೆ.

ಕ್ರಿಕೆಟ್‌ ತಾರೆಯರಾದ ರೋಹಿತ್‌ ಶರ್ಮಾ, ಕೆ.ಎಲ್‌. ರಾಹುಲ್‌, ಹಾರ್ದಿಕ್‌ ಮತ್ತು ಕ್ರುನಾಲ್‌ ಪಾಂಡ್ಯ, ಇಶಾನ್‌ ಕಿಶನ್‌ ಬರಲಿದ್ದಾರೆ. ಬಾಲಿವುಡ್‌ನ ಆಮೀರ್ ಖಾನ್‌, ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌ ಹಾಗೂ ಟ್ವಿಂಕಲ್‌ ಖನ್ನಾ, ಅಜಯ್‌ ದೇವಗನ್‌ ಮತ್ತು ಕಾಜೋಲ್‌, ಸೈಫ್‌ ಅಲಿ ಖಾನ್‌ ಹಾಗೂ ಕರೀನಾ, ರಣವೀರ್‌ ಸಿಂಗ್‌ ಹಾಗೂ ದೀಪಿಕ ಪಡುಕೋಣೆ, ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಸೇರಿದಂತೆ ಹಲವು ತಾರೆಯರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.