ADVERTISEMENT

ವಿಸ್ಟ್ರಾನ್: ತಯಾರಿಕೆ ಶೀಘ್ರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 16:42 IST
Last Updated 9 ಫೆಬ್ರುವರಿ 2021, 16:42 IST

ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರದಲ್ಲಿರುವ ತಯಾರಿಕಾ ಘಟಕದಲ್ಲಿ ಚಟುವಟಿಕೆಗಳನ್ನು ಶೀಘ್ರದಲ್ಲಿಯೇ ಪುನರಾರಂಭಿಸಲಾಗುವುದು ಎಂದು ವಿಸ್ಟ್ರಾನ್ ಕಂಪನಿ ಹೇಳಿದೆ. ಇದು ಆ್ಯಪಲ್‌ ಕಂಪನಿಗೆ ಐಫೋನ್‌ಗಳನ್ನು ತಯಾರಿಸಿ ಕೊಡುತ್ತದೆ.

ವೇತನ ಪಾವತಿ ಆಗಿಲ್ಲ ಎಂದು ಆರೋಪಿಸಿ ಕಂಪನಿಯ ಕೆಲವು ಉದ್ಯೋಗಿಗಳು ತಯಾರಿಕಾ ಘಟಕದ ಆವರಣದಲ್ಲಿ ಗಲಾಟೆ ನಡೆಸಿದ್ದರ ಪರಿಣಾಮವಾಗಿ, ಘಟಕವು ಬಾಗಿಲು ಮುಚ್ಚಿತ್ತು. ವಿಸ್ಟ್ರಾನ್‌ ಕಂಪನಿಯು ಹೊಸ ನೇಮಕಾತಿಗಳನ್ನು ಪೂರ್ಣಗೊಳಿಸಿದ್ದು, ಹೊಸಬರಿಗೆ ತರಬೇತಿ ನೀಡುತ್ತಿದೆ ಎಂದು ಗೊತ್ತಾಗಿದೆ.

‘ಲೋಪಗಳನ್ನು ಸರಿಪಡಿಸಿಕೊಳ್ಳುವ ಸಮಗ್ರ ಕೆಲಸಗಳು ಆಗಿವೆ. ವಿಸ್ಟ್ರಾನ್ ಕಂಪನಿಯು ತನ್ನ ನೇಮಕಾತಿ ತಂಡವನ್ನು ಪುನರ್‌ರಚಿಸಿದೆ. ಕಾರ್ಮಿಕರಿಗೆ ತರಬೇತಿ ಹಾಗೂ ನೆರವು ನೀಡುವುದನ್ನು ಹೆಚ್ಚಿಸಿದೆ’ ಎಂದು ಆ್ಯಪಲ್ ಕಂಪನಿ ಹೇಳಿದೆ.

ADVERTISEMENT

ತಯಾರಿಕಾ ಘಟಕದಲ್ಲಿ ಎಲ್ಲರೂ ಹೊಸ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ತಮ್ಮ ಹಕ್ಕುಗಳನ್ನು, ಸಮಸ್ಯೆಗಳನ್ನು ಹೇಗೆ ಹೇಳಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲಿದ್ದಾರೆ. ಆ್ಯಪಲ್‌ನ ನೌಕರರು ಹಾಗೂ ಸ್ವತಂತ್ರ ಪರಿಶೋಧಕರು ಘಟಕದಲ್ಲಿ ಹಾಜರಿದ್ದು, ಹೊಸ ವ್ಯವಸ್ಥೆ ಪರಿಣಾಮಕಾರಿಯಾಗಿ ಇದೆಯೇ ಎಂಬುದನ್ನು ನೋಡಲಿದ್ದಾರೆ ಎಂದು ಕೂಡ ಆ್ಯಪಲ್ ಹೇಳಿದೆ.

ವಿಸ್ಟ್ರಾನ್‌ನಲ್ಲಿನ ಚಟುವಟಿಕೆಗಳನ್ನು ವಿಚಕ್ಷಣೆಯಲ್ಲಿ ಇರಿಸಲಾಗುವುದು ಎಂದು ಆ್ಯಪಲ್ ಹೇಳಿದೆ ತಿಳಿಸಿದೆ. ‘ಎಲ್ಲರಿಗೂ ಸಂಬಳ ಸರಿಯಾಗಿ ಪಾವತಿ ಆಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ವಿಸ್ಟ್ರಾನ್‌ ಸ್ಮಾರ್ಟ್ ಡಿವೈಸಸ್ ಕಂಪನಿಯ ಸಿಇಒ ಡೇವಿಡ್ ಶೆನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.