ADVERTISEMENT

ಆ್ಯಪಲ್‌: ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿ ನೇಮಕ?

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 16:23 IST
Last Updated 21 ಏಪ್ರಿಲ್ 2024, 16:23 IST
Apple
Apple   

ನವದೆಹಲಿ: ಐಫೋನ್‌ ತಯಾರಿಕಾ ಕಂಪನಿ ಆ್ಯಪಲ್‌, ತನ್ನ ಬಿಡಿಭಾಗಗಳನ್ನು ತಯಾರಿಸಿ ಪೂರೈಸುವ ಕಂಪನಿಗಳ ಮೂಲಕ ಮುಂದಿನ ಮೂರು ವರ್ಷಗಳಲ್ಲಿ 5 ಲಕ್ಷ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಸ್ತುತ ದೇಶದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್‌ ಕಂಪನಿಯು ಐಫೋನ್‌ ತಯಾರಿಕೆಯ ಎರಡು ಘಟಕಗಳನ್ನು ಹೊಂದಿದೆ. ಇಲ್ಲಿ ಆ್ಯಪಲ್‌ನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಸದ್ಯ ಭಾರತದಲ್ಲಿ ಆ್ಯಪಲ್‌ ಉತ್ಪನ್ನಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ 1.5 ಲಕ್ಷ ಉದ್ಯೋಗಿಗಳು ಇದ್ದಾರೆ. 

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಆ್ಯಪಲ್‌, ಭಾರತದಲ್ಲಿ 5 ಪಟ್ಟು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ. ಇದಕ್ಕಾಗಿ ₹3.32 ಲಕ್ಷ ಕೋಟಿ ಬಂಡವಾಳ ಹೂಡಲು ನಿರ್ಧರಿಸಿದೆ. ಇದಕ್ಕೆ ಅನುಗುಣವಾಗಿ ಹೊಸದಾಗಿ ಉದ್ಯೋಗಿಗಳನ್ನು ನೇಮಕಕ್ಕೆ ತೀರ್ಮಾನಿಸಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

2023–24ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ ₹1 ಲಕ್ಷ ಕೋಟಿ ಮೌಲ್ಯದ ಆ್ಯಪಲ್‌ ಐಫೋನ್‌ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. 2022–23ರಲ್ಲಿ ₹52,273 ಕೋಟಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಲಾಗಿತ್ತು. ರಫ್ತು ‍ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಟ್ರೇಡ್ ಇಂಟೆಲಿಜೆನ್ಸ್ ವೇದಿಕೆಯಾದ ದಿ ಟ್ರೇಡ್ ವಿಷನ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.