ADVERTISEMENT

ಸಂಚಾರ ಸಾಥಿ | ಆ್ಯಪ್ ಅಳವಡಿಕೆಗೆ ಒಪ್ಪದ ಆ್ಯಪಲ್: ಮಾತುಕತೆಗೆ ಮುಂದಾದ ಸ್ಯಾಮ್ಸಂಗ್

ಪಿಟಿಐ
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
   

ನವದೆಹಲಿ: ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ ಸಾಥಿ ಆ್ಯಪ್‌ ಅಳವಡಿಕೆ ಕಡ್ಡಾಯ ಎಂದು ಕೇಂದ್ರ ದೂರಸಂಪರ್ಕ ಇಲಾಖೆಯು ನವೆಂಬರ್‌ 28ರಂದು ಹೊರಡಿಸಿರುವ ಆದೇಶದ ಬಗ್ಗೆ ಆ್ಯಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ಸರ್ಕಾರದ ಜೊತೆ ಮಾತುಕತೆ ನಡೆಸಲಿವೆ.

ಮೊಬೈಲ್‌ ಫೋನ್‌ಗಳಲ್ಲಿ ಈ ಆ್ಯಪ್‌ಅನ್ನು ಮೊದಲೇ ಅಳವಡಿಸಿರಬೇಕು ಎಂಬ ಆದೇಶದ ವಿಚಾರವಾಗಿ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಲು ಈ ಕಂಪನಿಗಳು ಯತ್ನಿಸಲಿವೆ ಎಂದು ಮೂಲಗಳು ಹೇಳಿವೆ.

‘ಸಂಚಾರ ಸಾಥಿ ಆ್ಯಪ್‌ ಅಳವಡಿಸುವುದಕ್ಕೆ ಸಂಬಂಧಿಸಿದ ಆದೇಶದ ಬಗ್ಗೆ ಆ್ಯಪಲ್ ಕಂಪನಿಯು ಚರ್ಚಿಸಲಿದೆ, ಸರ್ಕಾರದ ಜೊತೆ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಲಿದೆ. ಸರ್ಕಾರದ ಆದೇಶವನ್ನು ಈಗಿನ ರೂಪದಲ್ಲಿ ಜಾರಿಗೆ ತರಲು ಕಂಪನಿಗೆ ಸಾಧ್ಯವಾಗಲಿಕ್ಕಿಲ್ಲ’ ಎಂದು ಮೂಲವೊಂದು ತಿಳಿಸಿದೆ.

ADVERTISEMENT

ಸರ್ಕಾರದ ಆದೇಶದ ಪ್ರಕಾರ, ಆದೇಶ ಬಂದ 90 ದಿನಗಳ ನಂತರದಲ್ಲಿ ಭಾರತದಲ್ಲಿ ತಯಾರಾಗುವ ಹಾಗೂ ಭಾರತಕ್ಕೆ ಆಮದಾಗುವ ಎಲ್ಲ ಫೋನ್‌ಗಳು ಈ ಆ್ಯಪ್‌ ಹೊಂದಿರಬೇಕು. ಆದೇಶವನ್ನು ಪಾಲಿಸಿರುವ ಬಗ್ಗೆ ಎಲ್ಲ ಮೊಬೈಲ್‌ ತಯಾರಿಕಾ ಕಂಪನಿಗಳು ದೂರಸಂಪರ್ಕ ಇಲಾಖೆಗೆ 120 ದಿನಗಳ ಒಳಗೆ ವರದಿ ಮಾಡಿಕೊಳ್ಳಬೇಕು.

ಸ್ಯಾಮ್ಸಂಗ್ ಕಂಪನಿಯು ಆದೇಶದ ಬಗ್ಗೆ ಪರಿಶೀಲನೆ ನಡೆಸುತ್ತಿದೆ, ಅದು ಕೂಡ ಆದೇಶದ ಪಾಲನೆಗೆ ಮೊದಲು ಅದರ ಬಗ್ಗೆ ಸರ್ಕಾರದ ಜೊತೆ ಚರ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ವಿಚಾರವಾಗಿ ಸ್ಯಾಮ್ಸಂಗ್ ಮತ್ತು ಆ್ಯಪ‍ಲ್ ಕಂಪನಿಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ಮೊಬೈಲ್ ಫೋನ್‌ಗಳನ್ನು ಬಳಸಿ ನಡೆಸುವ ವಂಚನೆ ಕೃತ್ಯಗಳನ್ನು ತಡೆಯಲು ಸಂಚಾರ ಸಾಥಿ ಆ್ಯಪ್‌ ಅಳವಡಿಕೆಯು ಬಹಳ ಶಕ್ತಿಶಾಲಿಯಾದ ಕ್ರಮ, ಅದು ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆ ಎಂದು ಬಿಎಸ್‌ಎನ್‌ಎಲ್‌ ಕಂಪನಿಯ ಮಾಜಿ ಸಿಎಂಡಿ ಹಾಗೂ ಲಾವಾ ಇಂಟರ್‌ನ್ಯಾಷನಲ್ ಕಂಪನಿಯ ಸ್ವತಂತ್ರ ನಿರ್ದೇಶಕ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.

‘ಈ ಆದೇಶವು ಹ್ಯಾಂಡ್‌ಸೆಟ್‌ ತಯಾರಕರ ಮೇಲೆ ಒಂದಿಷ್ಟು ಹೊರೆಯನ್ನು ಹೊರಿಸುತ್ತದೆ ಎಂಬುದು ನಿಜ. ಈ ಆ್ಯಪ್ ಯಾವೆಲ್ಲ ಬಗೆಯ ದತ್ತಾಂಶಗಳನ್ನು ಪಡೆದುಕೊಳ್ಳುತ್ತದೆ, ಅವುಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ದೂರಸಂಪರ್ಕ ಇಲಾಖೆಯು ವಿವರ ನೀಡಬೇಕು. ಹೀಗೆ ಮಾಡಿದಾಗ ಖಾಸಗೀತನಕ್ಕೆ ಸಂಬಂಧಿಸಿದ ಆತಂಕಗಳನ್ನು ಕಡಿಮೆ ಮಾಡಲು ಆಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.