ADVERTISEMENT

ಕ್ರಾಶ್‌ ಟೆಸ್ಟ್‌ ಆಧರಿಸಿ ವಾಹನಗಳಿಗೆ ರ್‍ಯಾಂಕಿಂಗ್‌: ಗಡ್ಕರಿ

ಪಿಟಿಐ
Published 24 ಜೂನ್ 2022, 15:39 IST
Last Updated 24 ಜೂನ್ 2022, 15:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ವಾಹನಗಳಿಗೆ ಕ್ರಾಶ್ ಟೆಸ್ಟ್‌ ನಡೆಸಿ, ಅದರ ಆಧಾರದಲ್ಲಿ ರ್‍ಯಾಂಕಿಂಗ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಮ್‌ (ಭಾರತ್‌ ಎನ್‌ಸಿಎಪಿ) ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕೆಲಸ ಮಾಡಲಿದೆ. ಸ್ಟಾರ್ ರೇಟಿಂಗ್ಸ್‌ ಆಧಾರದ ಮೇಲೆ ಸುರಕ್ಷಿತವಾದ ಕಾರು ಆಯ್ಕೆ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತದೆ. ಸುರಕ್ಷಿತವಾದ ವಾಹನಗಳನ್ನು ತಯಾರಿಸುವಂತೆ ತಯಾರಕರ ಮಧ್ಯೆ ಆರೋಗ್ಯಕರ ಪೈಪೋಟಿಗೂ ಉತ್ತೇಜನ ನೀಡುತ್ತದೆ’ ಎಂದು ತಿಳಿಸಿದ್ದಾರೆ.‌

‘ಭಾರತ್‌ ಎನ್‌ಸಿಎಪಿ ಪರಿಚಯಿಸಲು ಕರಡು ಜಿಎಸ್‌ಆರ್‌ನ ಅಧಿಸೂಚನೆಗೆ ಒಪ್ಪಿಗೆ ನೀಡಿದ್ದೇನೆ. ಅದರಂತೆ, ಕ್ರಾಶ್ ಟೆಸ್ಟ್‌ನಲ್ಲಿ ವಾಹನದ ಸಾಮರ್ಥ್ಯವನ್ನು ಆಧರಿಸಿ ಅದಕ್ಕೆ 1ರಿಂದ 5ರವರೆಗೆ ರ್‍ಯಾಂಕಿಂಗ್‌ ನೀಡಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಷ್ಟೇ ಅಲ್ಲದೆ, ಭಾರತದ ವಾಹನೋದ್ಯಮದ ರಫ್ತು ಯೋಗ್ಯತೆಯನ್ನು ಇನ್ನಷ್ಟು ಹೆಚ್ಚಿಸಲು ಕೂಡ ಈ ವ್ಯವಸ್ಥೆಯು ಬಹಳ ಮುಖ್ಯವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.

ಭಾರತ್‌ ಎನ್‌ಸಿಎಪಿ ಕ್ರಾಶ್‌ ಟೆಸ್ಟ್‌ ಜಾಗತಿಕ ನಿಯಮಾವಳಿಗೆ ಅನುಗುಣವಾಗಿಯೇ ಇದೆ. ದೇಶದಲ್ಲಿಯೇ ವಾಹನಗಳ ಪರೀಕ್ಷೆ ನಡೆಸಿ ಪ್ರಮಾಣಪತ್ರ ಪಡೆಯಲು ತಯಾರಕರಿಗೆ ಅವಕಾಶ ಲಭ್ಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.