ADVERTISEMENT

ಬೆಳ್ಳುಳ್ಳಿ ದರ ಕುಸಿತ: ಪ್ರತಿಭಟನೆ

ವರ್ತಕರು, ಖರೀದಿದಾರರ ವಿರುದ್ಧ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 20:00 IST
Last Updated 18 ನವೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭಾನುವಾರ ದರ ಕುಸಿದಿದ್ದರಿಂದ, ಆಕ್ರೋಶಗೊಂಡ ರೈತರು ಬೆಳ್ಳುಳ್ಳಿಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.

ವ್ಯಾಪಾರಸ್ಥರು ದಿಢೀರನೆ ದರ ಇಳಿಕೆ ಮಾಡಿ, ಪ್ರತಿ ಕ್ವಿಂಟಲ್‌ ಎಸಳು ಬೆಳ್ಳುಳ್ಳಿಗೆ ₹ 500ರಿಂದ ₹ 600ಕ್ಕೆ, ಮಧ್ಯಮ ಗಾತ್ರದ ಬೆಳ್ಳುಳ್ಳಿಗೆ ₹ 800ರಿಂದ ₹ 1000ಕ್ಕೆ ಮತ್ತು ದೊಡ್ಡ ಬೆಳ್ಳುಳ್ಳಿಗೆ ₹ 1,200ರಿಂದ ₹ 1,800ಕ್ಕೆ ಹರಾಜು ಕೂಗಿದರು.

ಇದರಿಂದ ಸಿಟ್ಟಿಗೆದ್ದ ರೈತರು, ಖರೀದಿದಾರರು ಮತ್ತು ವ್ಯಾಪಾರಸ್ಥರ ವಿರುದ್ಧ ಪ್ರತಿಭಟನೆಗೆ ಮುಂದಾದರು. ‘ಗದಗ, ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಇದಕ್ಕಿಂತ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿದೆ. ಇಲ್ಲಿ ಮಾತ್ರ ಕಡಿಮೆ ದರ ನಿಗದಿಪಡಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಕಳೆದ ವಾರ ಈರುಳ್ಳಿ ದರ ಕುಸಿತಗೊಂಡಿತ್ತು. ಈಗ ಬೆಳ್ಳುಳ್ಳಿ ದರ ಇಳಿಸಲಾಗಿದೆ. ರೈತರಿಗೆ ನ್ಯಾಯ ಒದಗಿಸದಿದ್ದರೆ ಹೆದ್ದಾರಿ ತಡೆದು, ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಎಚ್ಚರಿಸಿದರು.

ನಂತರ ರೈತರು, ವ್ಯಾಪಾರಸ್ಥರು ಹಾಗೂ ಖರೀದಿದಾರರೊಂದಿಗೆ ಎಪಿಎಂಸಿ ಅಧ್ಯಕ್ಷ ಸಿದ್ಧಲಿಂಗಪ್ಪ ಕುಡಗೋಲ ಚರ್ಚೆ ನಡೆಸಿದರು. ಬೇರೆ, ಬೇರೆ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ದರವನ್ನು ಖಚಿತಪಡಿಸಿಕೊಂಡು ಎಸಳು ಬೆಳ್ಳುಳ್ಳಿಗೆ ₹ 600ರಿಂದ ₹ 800, ಮಧ್ಯಮ ಗಾತ್ರದ ಬೆಳ್ಳುಳ್ಳಿಗೆ ₹ 1,200ರಿಂದ ₹ 1,600 ಮತ್ತು ದೊಡ್ಡ ಗಾತ್ರದ ಬೆಳ್ಳುಳ್ಳಿಗೆ ₹ 1,800ರಿಂದ ₹ 2,200ರವರೆಗೆ ದರ ನಿಗದಿಪಡಿಸಿದರು. ನಂತರ ರೈತರು ಪ್ರತಿಭಟನೆ ಹಿಂದೆ ಪಡೆದರು. ಮಾರುಕಟ್ಟೆಗೆ 15 ಸಾವಿರಕ್ಕೂ ಹೆಚ್ಚು ಚೀಲ ಬೆಳ್ಳುಳ್ಳಿ ಆವಕ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.