ADVERTISEMENT

ಯಶಸ್ವಿ ಸ್ಟಾರ್ಟ್‌ಅಪ್‌ಗಳಿಗೆ ಪೂರಕ ಸೌಲಭ್ಯ: ವಿಶ್ವ ನಗರಗಳ ಸಾಲಿಗೆ ಬೆಂಗಳೂರು

ಪಿಟಿಐ
Published 25 ಜೂನ್ 2020, 16:58 IST
Last Updated 25 ಜೂನ್ 2020, 16:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಜಾಗತಿಕವಾಗಿ ಅತ್ಯಂತ ಯಶಸ್ವಿ ಸ್ಟಾರ್ಟ್‌ಅಪ್‌ ಸ್ಥಾಪಿಸುವುದಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ವಿಶ್ವದ 40 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮತ್ತು ದೆಹಲಿ ಸ್ಥಾನ ಪಡೆದಿವೆ.

ನಗರಗಳ ಜಾಗತಿಕ ಶ್ರೇಯಾಂಕದಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್‌ ವ್ಯಾಲೆ ಮೊದಲ ಸ್ಥಾನದಲ್ಲಿ ಇದೆ. ಬಂಡವಾಳದ ಅನುಕೂಲತೆ, ಹೂಡಿಕೆ ಅವಕಾಶ ಮತ್ತು ಜಾಗತಿಕ ಪ್ರತಿಭೆಗಳ ಲಭ್ಯತೆಯ ಕಾರಣಕ್ಕೆ ಲಂಡನ್‌ ಎರಡನೇ ಸ್ಥಾನದಲ್ಲಿ ಇದೆ.

ಸಂಶೋಧನಾ ಕ್ಷೇತ್ರದ ಸ್ಟಾರ್ಟ್‌ಅಪ್‌ ಜೆನೊಮ್‌ ಸಿದ್ಧಪಡಿಸಿರುವ ‘ಜಾಗತಿಕ ಸ್ಟಾರ್ಟ್‌ಅಪ್‌ ಸೌಲಭ್ಯ ವರದಿ 2020’ರಲ್ಲಿ ಈ ವಿವರಗಳಿವೆ. ಸ್ಟಾರ್ಟ್‌ಅಪ್‌ಗಳು ಜಾಗತಿಕ ಯಶಸ್ಸು ಸಾಧಿಸಲು ನೆರವಾಗುವ ನಗರಗಳ ಶ್ರೇಯಾಂಕಗಳನ್ನು ವರದಿಯಲ್ಲಿ ನಿಗದಿಪಡಿಸಲಾಗಿದೆ.

ADVERTISEMENT

ನವೋದ್ಯಮವೊಂದು ಜಾಗತಿಕವಾಗಿ ಯಶಸ್ವಿಯಾಗುವ ಬಗ್ಗೆ ಆರಂಭಿಕ ಹಂತದಲ್ಲಿಯೇ ಅತ್ಯುತ್ತಮ ಪ್ರಯತ್ನ ಮಾಡಲು ಅಗತ್ಯ ಸೌಲಭ್ಯ ಮತ್ತು ಅವಕಾಶ ಒದಗಿಸುವ ನಗರಗಳನ್ನು ಈ ವರದಿಯಲ್ಲಿ ಪರಿಗಣಿಸಲಾಗಿದೆ.

ನವೋದ್ಯಮಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ದೆಹಲಿಯು ಬೆಂಗಳೂರಿನ ಜತೆ ಸೇರಿಕೊಂಡಿದೆ. ಹಣಕಾಸು ನೆರವು ಲಭ್ಯವಾಗುವ ವಿಷಯದಲ್ಲಿ ಬೆಂಗಳೂರು ಗಮನ ಸೆಳೆದಿದೆ. ಹೊಸ ಪೇಟೆಂಟ್‌ ಸೃಷ್ಟಿಸುವಲ್ಲಿ ದೆಹಲಿಯ ಸಾಧನೆ ಉತ್ತಮವಾಗಿದೆ.

ಮುಂಬೈ ಮಹಾನಗರವು ನವೋದ್ಯಮಗಳಿಗೆ ಪೂರಕ ಸೌಲಭ್ಯ ಕಲ್ಪಿಸುವ ಪ್ರವರ್ಧಮಾನಕ್ಕೆ ಬರುತ್ತಿರುವ ನಗರಗಳಲ್ಲಿ ಮುಂಚೂಣಿಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.