ಪ್ರಾತಿನಿಧಿಕ ಚಿತ್ರ
ಚಿತ್ರಕೃಪೆ: istockphotos
ನವದೆಹಲಿ: ಬ್ಯಾಂಕ್ ಖಾತೆಗೆ ಗರಿಷ್ಠ ನಾಲ್ಕು ಮಂದಿಯನ್ನು ನಾಮನಿರ್ದೇಶನ ಮಾಡುವ ಸೌಲಭ್ಯವು ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ನಾಮನಿರ್ದೇಶನಕ್ಕೆ ಸಂಬಂಧಿಸಿದ ನಿಯಮದಲ್ಲಿಯೂ ತಿದ್ದುಪಡಿ ಆಗಿದೆ.
ಖಾತೆಗಳಿಗೆ ಗ್ರಾಹಕರು ಗರಿಷ್ಠ ನಾಲ್ಕು ಮಂದಿಯ ಹೆಸರನ್ನು ನಾಮನಿರ್ದೇಶನ ಮಾಡಬಹುದು. ಇಷ್ಟು ಹೆಸರುಗಳನ್ನು ಒಂದೇ ಬಾರಿಗೆ ಅಥವಾ ಒಂದಾದ ನಂತರ ಇನ್ನೊಂದರಂತೆ ನಾಮನಿರ್ದೇಶನ ಮಾಡಲು ಅವಕಾಶ ಇದೆ. ಇದರಿಂದಾಗಿ ಠೇವಣಿದಾರರ ಹಾಗೂ ನಾಮನಿರ್ದೇಶಿತ ವ್ಯಕ್ತಿಗಳ ಕ್ಲೇಮ್ ಇತ್ಯರ್ಥ ಸರಳವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಲಾಕರ್‌ಗಳಲ್ಲಿ ಇರುವ ವಸ್ತುಗಳಿಗೆ ಒಬ್ಬರ ನಂತರ ಇನ್ನೊಬ್ಬರ ಹೆಸರನ್ನು ನಾಮನಿರ್ದೇಶನ ಮಾಡಲು ಮಾತ್ರ ಅವಕಾಶ ಇದೆ.
‘ಠೇವಣಿದಾರರು ನಾಲ್ಕು ಜನರ ಹೆಸರನ್ನು ನಾಮನಿರ್ದೇಶನ ಮಾಡಿ, ಪ್ರತಿ ವ್ಯಕ್ತಿಯು ಠೇವಣಿ ಮೊತ್ತದಲ್ಲಿ ಎಷ್ಟು ಪ್ರಮಾಣದ ಮೊತ್ತಕ್ಕೆ ಹಕ್ಕುದಾರ ಎಂಬುದನ್ನು ಸ್ಪಷ್ಟಪಡಿಸಬಹುದು’ ಎಂದು ಪ್ರಕಟಣೆಯು ಹೇಳಿದೆ.