ADVERTISEMENT

ಚೆಕ್‌ ಸಮಸ್ಯೆ: ಹಣ ವರ್ಗಾವಣೆಗೆ ತೊಡಕು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 0:30 IST
Last Updated 7 ನವೆಂಬರ್ 2025, 0:30 IST
<div class="paragraphs"><p>ಚೆಕ್</p></div>

ಚೆಕ್

   
ಚೆಕ್‌ ಸಲ್ಲಿಸಿದ ನಂತರ ಮಾನ್ಯ ಮಾಡುವಲ್ಲಿ ವಿಳಂಬ | ತಾಂತ್ರಿಕ ದೋಷಗಳಿಂದಾಗಿ ಈ ಸಮಸ್ಯೆ ಎಂಬ ವಿವರಣೆ | ಇನ್ನೊಂದು ವಾರದಲ್ಲಿ ಸಮಸ್ಯೆ ಸರಿಹೋಗುವ ವಿಶ್ವಾಸ

ಬೆಂಗಳೂರು: ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ ಕೆಲವೇ ತಾಸುಗಳಲ್ಲಿ ಹಣದ ವರ್ಗಾವಣೆ ಆಗುವ ಸೌಲಭ್ಯವು ಅಕ್ಟೋಬರ್‌ 4ರಿಂದ ಜಾರಿಗೆ ಬರುತ್ತದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿತ್ತಾದರೂ, ಆ ಸೌಲಭ್ಯವು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ವ್ಯವಸ್ಥೆಯಲ್ಲಿ ದೋಷಗಳು ನಿವಾರಣೆ ಆಗಿಲ್ಲ.

ಚೆಕ್‌ ಸಲ್ಲಿಸಿ ಹಲವು ದಿನಗಳು ಕಳೆದರೂ ಹಣದ ವರ್ಗಾವಣೆ ಆಗದಿರುವ ನಿದರ್ಶನಗಳು ಇವೆ. ಈ ರೀತಿ ಆಗಿರುವುದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಬ್ಯಾಂಕಿಂಗ್‌ ವ್ಯವಸ್ಥೆಯ ಪ್ರತಿನಿಧಿಗಳು ಹೇಳುತ್ತಿದ್ದಾರೆ.

ADVERTISEMENT

‘ಚೆಕ್ ಸಲ್ಲಿಸಿದ ಕೆಲವು ತಾಸುಗಳಲ್ಲಿ ಹಣ ಜಮಾ ಆಗುವ ಸೌಲಭ್ಯ ಅಕ್ಟೋಬರ್‌ 4ರಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಹೇಳಿತ್ತು. ಆದರೆ ಹಣದ ವರ್ಗಾವಣೆ ಪೂರ್ಣಗೊಳ್ಳುವುದಕ್ಕೆ ಒಂದು ವಾರ ಸಮಯ ತೆಗೆದುಕೊಂಡಿದ್ದೂ ಇದೆ. ಇದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಧ್ಯಾಹ್ನ 12 ಗಂಟೆಗೆ ಮೊದಲು ಬ್ಯಾಂಕ್‌ಗೆ ಚೆಕ್ ಸಲ್ಲಿಸಿದರೆ, ಹಣದ ವರ್ಗಾವಣೆಯು ಅದೇ ದಿನ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದರೆ ಆ ವಿಚಾರದಲ್ಲಿ ಖಾತರಿ ಇಲ್ಲ, ವರ್ಗಾವಣೆ ವಿಳಂಬವೂ ಆಗಬಹುದು ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

ಚೆಕ್‌ ಹಾಕಿದ ನಂತರ ಹಣದ ವರ್ಗಾವಣೆಯು ಆರ್‌ಬಿಐ ಹೇಳಿದ ಸಮಯಮಿತಿಯಲ್ಲಿ ಆಗುತ್ತಿಲ್ಲ ಎಂಬ ವಿಚಾರವು ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ (ಎಸ್‌ಎಲ್‌ಬಿಸಿ) ಸಭೆಯಲ್ಲಿ ಕೂಡ ಪ್ರಸ್ತಾಪ ಆಗಿದೆ. ಸಮಿತಿಯಲ್ಲಿ ಹಾಜರಿದ್ದ ಆರ್‌ಬಿಐ ಪ್ರತಿನಿಧಗಳು, ಚೆಕ್‌ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆ ಪೂರ್ಣವಾಗುವ ವ್ಯವಸ್ಥೆಯು ಜನವರಿ 1ರಿಂದ ಸರಿಯಾಗಿ ಆಗುತ್ತದೆ ಎಂಬ ಭರವಸೆ ನೀಡಿದ್ದಾರೆ ಎಂದು ಎಫ್‌ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ತಿಳಿಸಿದರು.

‘ಆರ್‌ಬಿಐ ಸೂಚನೆ ಪ್ರಕಾರ ಚೆಕ್‌ ಸಲ್ಲಿಸಿದ ಎರಡು ತಾಸುಗಳಲ್ಲಿ ನಗದು ವರ್ಗಾವಣೆ ಪೂರ್ಣವಾಗಬೇಕು. ಆದರೆ ವಾಸ್ತವದಲ್ಲಿ ಅದು ಆಗುತ್ತಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಹೀಗಾಗುತ್ತಿದೆ. ಕೆಲವು ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಹಾಗೂ ಅಗತ್ಯ ಮೂಲಸೌಲಭ್ಯದ ಕೊರತೆ ಇರುವುದೂ ಇದಕ್ಕೆ ಕಾರಣವಾಗಿದೆ. ಹಣದ ವರ್ಗಾವಣೆ ಪೂರ್ಣಗೊಳ್ಳುವುದಕ್ಕೆ ಮೂರು ದಿನಗಳವರೆಗೂ ಸಮಯ ಬೇಕಾಗುತ್ತಿದೆ’ ಎಂದು ಖಾಸಗಿ ಬ್ಯಾಂಕ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತರ್‌ಬ್ಯಾಂಕ್‌ ವಹಿವಾಟು ಅನುಮೋದನೆಯಲ್ಲಿ ಸಮಸ್ಯೆ ಆಗುತ್ತಿದೆ. ₹10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳನ್ನು ಮಾನ್ಯ ಮಾಡುವಲ್ಲಿ ಸಮಸ್ಯೆ ಇದೆ. ಆದರೆ ಅದಕ್ಕಿಂತ ಕಡಿಮೆ ಮೊತ್ತದ ಚೆಕ್‌ಗಳನ್ನು ಮಾನ್ಯ ಮಾಡುವ ಕೆಲಸವು ಬೇಗನೆ ಆಗುತ್ತಿದೆ. ದೊಡ್ಡ ಮೊತ್ತದ ಚೆಕ್‌ಗಳನ್ನು ಮಾನ್ಯ ಮಾಡಲು ಬಹಳ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂದು ಷರತ್ತಿನೊಂದಿಗೆ ತಿಳಿಸಿದರು.

ಇನ್ನು ಏಳು ದಿನಗಳಲ್ಲಿ ಸಮಸ್ಯೆಗಳು ಪರಿಹಾರ ಕಾಣಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.