ADVERTISEMENT

ಖಾಸಗೀಕರಣ ವಿರೋಧಿಸಿ ಮುಷ್ಕರ: ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿ

ನಿರ್ಧಾರ ಕೈಬಿಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರದ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 16:59 IST
Last Updated 15 ಮಾರ್ಚ್ 2021, 16:59 IST
ಬ್ಯಾಂಕಿಂಗ್‌ ವ್ಯವಸ್ಥೆ–ಪ್ರಾತಿನಿಧಿಕ ಚಿತ್ರ
ಬ್ಯಾಂಕಿಂಗ್‌ ವ್ಯವಸ್ಥೆ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು:ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಗೆ (ಯುಎಫ್‌ಬಿಯು) ಸೇರಿದ ಎಲ್ಲ ಒಂಭತ್ತು ಸಂಘಟನೆಗಳು ಬ್ಯಾಂಕ್‌ ಮುಷ್ಕರಕ್ಕೆ ಬೆಂಬಲ ನೀಡಿವೆ. ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಹಣ ವರ್ಗಾವಣೆ, ಸ್ವೀಕೃತಿ, ಸಾಲ ಮಂಜೂರಾತಿ, ಚೆಕ್‌ ಕ್ಲಿಯರೆನ್ಸ್‌ನಂತಹ ಸೇವೆಗಳಿಗೆ ಸೋಮವಾರ ಅಡ್ಡಿಯಾಯಿತು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಪ್ರಸ್ತಾವನೆ ವಿರೋಧಿಸಿ ನಡೆದ ಮುಷ್ಕರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳನ್ನು ಹೊರತುಪಡಿಸಿ, ಇನ್ನುಳಿದ ಬಹುತೇಕ ಸಿಬ್ಬಂದಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಮಾಲೀಕತ್ವದಲ್ಲಿ ಇರುವ ಎರಡು ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಸ್ತಾವ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿದೆ.

‘ಕೇಂದ್ರ ಸರ್ಕಾರವು ಮುಷ್ಕರಕ್ಕೆ ಯಾವ ರೀತಿ ಸ್ಪಂದಿಸಲಿದೆ ಎನ್ನುವುದನ್ನು ಆಧರಿಸಿ ಮುಂದಿನ ಹೆಜ್ಜೆ ಇಡಲಾಗುವುದು. ಸರ್ಕಾರವು ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದರೆ ಮುಷ್ಕರ ತೀವ್ರಗೊಳಿಸುವ, ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಸಾಧ್ಯತೆಯೂ ಇದೆ’ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆಯ (ಐಎನ್‌ಬಿಇಎಫ್) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ. ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಖಾಸಗೀಕರಣದ ಪರಿಣಾಮವಾಗಿ ಬ್ಯಾಂಕ್‌ ಸೇವೆಗಳು ನಗರ ಕೇಂದ್ರಿತ ಆಗಬಹುದು. ಗ್ರಾಮೀಣ ಪ್ರದೇಶದ ಶಾಖೆಗಳು ಮುಚ್ಚುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೆ ಕೃಷಿ, ಎಂಎಸ್‌ಎಂಇ ವಲಯಗಳಿಗೆ ಸಾಲ ಪಡೆಯಲು ಕಷ್ಟವಾಗಬಹುದು. ದುರ್ಬಲ ವರ್ಗಗಳಿಗೆ ಶೇ 4ರ ಬಡ್ಡಿದರದಲ್ಲಿ ಅಂದಾಜು ₹ 15 ಸಾವಿರದಷ್ಟು ಕಡಿಮೆ ಮೊತ್ತದ ಸಾಲ ನೀಡುವ ಸೌಲಭ್ಯ ಇಲ್ಲವಾಗಬಹುದು’ ಎಂದು ಅವರು ಹೇಳಿದರು.

ಸರ್ಕಾರಿ ವಲಯದ ಎಲ್ಲಾ ಬ್ಯಾಂಕ್‌ಗಳು ಹಾಗೂ ತಮ್ಮ ಒಕ್ಕೂಟಗಳು ಇರುವ ಕೆಲವು ಹಳೆಯ ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿ ಈ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್‌.ನಾಗರಾಜನ್‌ ತಿಳಿಸಿದ್ದಾರೆ.

ಬ್ಯಾಂಕ್ ನೌಕರರ ಪ್ರತಿಭಟನೆಯ ನಿರ್ಧಾರವನ್ನು ಕೇಂದ್ರ ಸರ್ಕಾರದ ಗೆಜೆಟೆಡ್ ಅಧಿಕಾರಿಗಳ ಸಂಘಟನೆಗಳು (ಸಿಸಿಜಿಜಿಒಸಿ) ಬೆಂಬಲಿಸಿದ್ದು, ಬ್ಯಾಂಕ್ ಉದ್ಯೋಗಿಗಳ ಜೊತೆ ಇರುವುದಾಗಿಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘಟನೆಗೆ (ಎಐಬಿಒಸಿ) ಪತ್ರ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.