
ನವದೆಹಲಿ: ಸಾರ್ವಜನಿಕರಿಗೆ ಷೇರು ಮಾರಾಟ (ಐಪಿಒ) ಮಾಡುವ ಮೂಲಕ ₹1,071 ಕೋಟಿ ಬಂಡವಾಳ ಸಂಗ್ರಹಿಸಲು ಭಾರತೀಯ ಕಲ್ಲಿದ್ದಲು ನಿಗಮದ ಅಂಗಸಂಸ್ಥೆ ‘ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್’ (ಬಿಸಿಸಿಎಲ್) ಮುಂದಾಗಿದೆ.
ಪ್ರತಿ ಷೇರಿನ ಬೆಲೆಯನ್ನು ₹21–₹23ಕ್ಕೆ ನಿಗದಿಪಡಿಸಿದೆ. ಜನವರಿ 9ರಿಂದ 13ರವರೆಗೆ ಷೇರುಗಳಿಗೆ ಬಿಡ್ ಸಲ್ಲಿಕೆಗೆ ಅವಕಾಶ ಇರಲಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ. ಆರಂಭಿಕ ಹೂಡಿಕೆದಾರರು (ಆ್ಯಂಕರ್ ಇನ್‌ವೆಸ್ಟರ್ಸ್) ಜನವರಿ 8ರಂದು ಐಪಿಒಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.
ಆಫರ್ ಫಾರ್ ಸೇಲ್ (ಒಎಫ್‌ಎಸ್) ಮೂಲಕ 46.57 ಕೋಟಿ ಷೇರುಗಳನ್ನು ಮಾರಾಟ ಮಾಡಲಿದೆ. ಇದು ಈ ವರ್ಷದ ಮೊದಲ ಐಪಿಒ ಆಗಿದೆ.
ಒಟ್ಟು ಷೇರುಗಳ ಪೈಕಿ ಶೇ 50ರಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ (ಕ್ಯುಐಬಿ) ಮೀಸಲಿರಿಸಲಾಗಿದೆ. ಶೇ 35ರಷ್ಟು ಷೇರುಗಳನ್ನು ಸಾಂಸ್ಥಿಕೇತರ ಹೂಡಿಕೆದಾರರು ಮತ್ತು ಶೇ 15ರಷ್ಟು ಷೇರುಗಳನ್ನು ರಿಟೇಲ್ ಹೂಡಿಕೆದಾರರಿಗೆ ಮೀಸಲಾಗಿ ಇಡಲಾಗಿದೆ ಎಂದು ತಿಳಿಸಿದೆ.
ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹10,700 ಕೋಟಿಗೂ ಅಧಿಕವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.