ನವದೆಹಲಿ: ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬೆಂಗಳೂರಿನಲ್ಲಿ ವಸತಿ ಆಸ್ತಿಗಳ ಬೆಲೆಯು ವಾರ್ಷಿಕ ಶೇಕಡ 10ರಷ್ಟು ಹೆಚ್ಚಳ ಕಂಡಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಸಿದ್ಧಪಡಿಸಿರುವ ಅಂಕಿ–ಅಂಶಗಳು ಹೇಳಿವೆ.
ಈ ಅವಧಿಯಲ್ಲಿ ಡೆವಲಪರ್‌ಗಳಿಂದ ನೇರವಾಗಿ ಆಗುವ ಖರೀದಿಗಳಲ್ಲಿ (ಪ್ರಾಥಮಿಕ ಮಾರುಕಟ್ಟೆ) ಬೆಲೆಯು ಈ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಚದರ ಅಡಿ ಬೆಲೆಯು ₹8,100 ಇದ್ದಿದ್ದು ಈ ಬಾರಿ ₹8,870ಕ್ಕೆ ಹೆಚ್ಚಳ ಆಗಿದೆ ಎಂದು ಅದು ಹೇಳಿದೆ.
ದೆಹಲಿ – ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ದೆಹಲಿ–ಎನ್‌ಸಿಆರ್) ವಸತಿ ಆಸ್ತಿಗಳ ಬೆಲೆಯು ಇದೇ ಅವಧಿಯಲ್ಲಿ ಶೇ 24ರಷ್ಟು ಏರಿಕೆ ಆಗಿದೆ. ಬೇಡಿಕೆಯಲ್ಲಿ ಹೆಚ್ಚಳ, ಅದರಲ್ಲೂ ಮುಖ್ಯವಾಗಿ ಐಷಾರಾಮಿ ವರ್ಗದ ಮನೆಗಳಿಗೆ ಬೇಡಿಕೆ ಜಾಸ್ತಿ ಆಗಿದ್ದುದು ಈ ಏರಿಕೆಗೆ ಕಾರಣ ಎಂದು ಅನರಾಕ್ ಹೇಳಿದೆ.
ಹಿಂದಿನ ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ವಸತಿ ಆಸ್ತಿಗಳ ಸರಾಸರಿ ಬೆಲೆಯು ಚದರ ಅಡಿಗೆ ₹7,200ರಷ್ಟು ಇತ್ತು. ಇದು ಈ ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ₹8,900ಕ್ಕೆ ತಲುಪಿದೆ. ಗುರುಗ್ರಾಮ, ನೊಯಿಡಾ, ಗ್ರೇಟರ್ ನೊಯಿಡಾ, ದೆಹಲಿ ಮತ್ತು ಗಾಜಿಯಾಬಾದ್ ಪ್ರದೇಶಗಳು ದೆಹಲಿ–ಎನ್‌ಸಿಆರ್‌ನಲ್ಲಿ ಪ್ರಮುಖ ವಸತಿ ಮಾರುಕಟ್ಟೆಗಳಾಗಿವೆ.
ದೇಶದ ಏಳು ಪ್ರಮುಖ ನಗರಗಳನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ ವಸತಿ ಆಸ್ತಿಗಳ ಬೆಲೆಯು ಶೇ 9ರಷ್ಟು ಹೆಚ್ಚಳ ಕಂಡಿದೆ ಎಂದು ಅನರಾಕ್ ಹೇಳಿದೆ. ಏಳು ನಗರಗಳ ಪೈಕಿ ಅತಿಹೆಚ್ಚಿನ (ಶೇ 24ರಷ್ಟು) ಪ್ರಮಾಣದ ಬೆಲೆ ಏರಿಕೆ ಆಗಿರುವುದು ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ.
‘ಗುಣಮಟ್ಟದ ವಸತಿ ಆಸ್ತಿಗಳಿಗೆ ಬೇಡಿಕೆಯು ಸ್ಥಿರವಾಗಿ ಇರುವುದನ್ನು ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿನ ಬೆಲೆ ಏರಿಕೆಯು ಹೇಳುತ್ತಿದೆ’ ಎಂದು ಕ್ರಿಸುಮಿ ಕಾರ್ಪೊರೇಷನ್‌ನ ಅಧ್ಯಕ್ಷ ಅಶೋಕ್ ಕಪೂರ್ ಹೇಳಿದ್ದಾರೆ.
ಅನರಾಕ್ ನೀಡಿರುವ ಅಂಕಿ–ಅಂಶಗಳ ಪ್ರಕಾರ, ಏಪ್ರಿಲ್–ಜೂನ್ ಅವಧಿಗೆ ಹೋಲಿಸಿದರೆ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಬೆಲೆಯು ಏಳು ನಗರಗಳಲ್ಲಿ ಶೇ 1ರಿಂದ ಶೇ 3ರವರೆಗೆ ಏರಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.