ADVERTISEMENT

‌‌ಮೆಟ್ರೊ ಕೆಂಪು ಮಾರ್ಗ: ಸರ್ಜಾಪುರ, ಥಣಿಸಂದ್ರದಲ್ಲಿ ಮನೆಗಳ ಬೆಲೆ ಶೇ 80 ಏರಿಕೆ

ಪಿಟಿಐ
Published 15 ಆಗಸ್ಟ್ 2025, 23:37 IST
Last Updated 15 ಆಗಸ್ಟ್ 2025, 23:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬೆಂಗಳೂರಿನ ಸರ್ಜಾಪುರ ರಸ್ತೆ ಮತ್ತು ಥಣಿಸಂದ್ರ ಮುಖ್ಯ ರಸ್ತೆಯಲ್ಲಿನ ಮನೆಗಳ ಸರಾಸರಿ ಬೆಲೆಯು ಕಳೆದ ಮೂರೂವರೆ ವರ್ಷದಲ್ಲಿ ಶೇ 80ರಷ್ಟು ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ತಿಳಿಸಿದೆ.

2021ರ ಅಂತ್ಯದಲ್ಲಿ ಸರ್ಜಾಪುರ ರಸ್ತೆಯಲ್ಲಿನ ಮನೆಗಳ ಬೆಲೆ ಪ್ರತಿ ಚದರ ಅಡಿಗೆ ಸರಾಸರಿ ₹6,050 ಇತ್ತು. ಪ್ರಸಕ್ತ ವರ್ಷದ ಏಪ್ರಿಲ್–ಜೂನ್ ವೇಳೆಗೆ ₹10,800 ಆಗಿದ್ದು, ಶೇ 79ರಷ್ಟು ಹೆಚ್ಚಳವಾಗಿದೆ. ಥಣಿಸಂದ್ರದ ಮುಖ್ಯ ರಸ್ತೆಯ ಬೆಲೆ ಪ್ರತಿ ಚದರ ಅಡಿಗೆ ₹5,345ರಿಂದ ₹9,700ಕ್ಕೆ ಏರಿಕೆಯಾಗಿದ್ದು, ಶೇ 81ರಷ್ಟು ಬೆಲೆ ಹೆಚ್ಚಳವಾಗಿದೆ.

ಇದೇ ಅವಧಿಯಲ್ಲಿ ಈ ಪ್ರದೇಶದಲ್ಲಿನ ಮನೆಗಳ ಬಾಡಿಗೆ ದರವು ಶೇ 81ರಷ್ಟು ಹೆಚ್ಚಳವಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ವರದಿಯಲ್ಲಿ ತಿಳಿಸಲಾಗಿದೆ. 

ADVERTISEMENT

ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ಪುಣೆ, ನವದೆಹಲಿ, ಮುಂಬೈ ಮಹಾನಗರ ಪ್ರದೇಶ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಜಾಗದ ಮೌಲ್ಯ ಶೇ 24ರಿಂದ ಶೇ 139ರಷ್ಟು ಹೆಚ್ಚಳವಾಗಿದೆ. ಬಾಡಿಗೆಯು ಶೇ 32ರಿಂದ ಶೇ 81ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಸರ್ಜಾಪುರ ರಸ್ತೆ ಬಹಳ ಹಿಂದಿನಿಂದಲೂ ಬೆಂಗಳೂರಿನ ಪೂರ್ವ ಐ.ಟಿ ಕಾರಿಡಾರ್‌ನ ಭಾಗವಾಗಿದೆ. ಹೆಬ್ಬಾಳವನ್ನು ಸರ್ಜಾಪುರಕ್ಕೆ ಸಂಪರ್ಕಿಸುವ ‘ನಮ್ಮ ಮೆಟ್ರೊ’ದ ಕೆಂಪು ಮಾರ್ಗದ ನಿರ್ಮಾಣವು ಹೊಸ ಆಸಕ್ತಿಯನ್ನು ಖರೀದಿದಾರರಲ್ಲಿ ಹೆಚ್ಚಿಸಿದೆ. ಥಣಿಸಂದ್ರ ಮುಖ್ಯ ರಸ್ತೆಯು ಮಾನ್ಯತಾ ಟೆಕ್ ಪಾರ್ಕ್‌ಗೆ ಹತ್ತಿರವಾಗಿದೆ. ಅಲ್ಲದೆ ರಸ್ತೆ ಸಂಪರ್ಕದಲ್ಲಿ ಸುಧಾರಣೆ ಆಗಿರುವುದರಿಂದ ಐ.ಟಿ ವೃತ್ತಿಪರರಿಗೆ ಇದು ಆಕರ್ಷಕ ತಾಣವಾಗಿದೆ ಎಂದು ಹೇಳಿದೆ.

‘ಸರ್ಜಾಪುರ ರಸ್ತೆ ಮತ್ತು ಥಣಿಸಂದ್ರದ ಮುಖ್ಯ ರಸ್ತೆಯು ಪ್ರಮುಖ ಸ್ಥಳಗಳಾಗಿವೆ. ಹೊರವರ್ತುಲ ರಸ್ತೆ, ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ, ಮುಂಬರಲಿರುವ ಸರ್ಜಾಪುರ –ಹೆಬ್ಬಾಳದ ಕಾರಿಡಾರ್ ಜಾಗದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಸತ್ವ ಸಮೂಹದ ಅಧ್ಯಕ್ಷೆ (ಮಾರಾಟ, ಸಿಆರ್‌ಎಂ ಮತ್ತು ಮಾರ್ಕೆಟಿಂಗ್ ವಿಭಾಗ) ಕರಿಷ್ಮಾ ಸಿಂಗ್ ಹೇಳಿದ್ದಾರೆ. ಈ ಪ್ರಮುಖ ಪ್ರದೇಶದಲ್ಲಿನ ಸೀಮಿತ ಪೂರೈಕೆಯು ಸಹ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. 

‘ಸರ್ಜಾಪುರ ನವೋದ್ಯಮ ಮತ್ತು ಯೂನಿಕಾರ್ನ್‌ಗಳಿಗೆ ಪ್ರಮುಖ ತಾಣವಾಗಿದ್ದರೆ, ಥಣಿಸಂದ್ರವು ಉದ್ಯಮಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ತಾಣವಾಗಿದೆ. ಇದು ಹೂಡಿಕೆದಾರರ ದೃಷ್ಟಿಯಲ್ಲಿ ಹೂಡಿಕೆಗೆ ಸೂಕ್ತ ಸ್ಥಳವಾಗಿದೆ’ ಎಂದು ಪ್ರಾಪರ್ಟಿ ಫಸ್ಟ್ ರಿಯಾಲ್ಟಿಯ ಸಂಸ್ಥಾಪಕ ಮತ್ತು ಸಿಇಒ ಭವೇಶ್ ಕೊಠಾರಿ ಹೇಳಿದ್ದಾರೆ.

  • ಸರ್ಜಾಪುರದಲ್ಲಿ ಚ.ಅಡಿ ₹10,800

  • ಥಣಿಸಂದ್ರದಲ್ಲಿ ₹9,700 ಮನೆಗಳ ಬಾಡಿಗೆ ದರವು ಶೇ 81ರಷ್ಟು ಹೆಚ್ಚಳ

  • ಮೂಲಸೌಕರ್ಯ ಹೆಚ್ಚಳದಿಂದ ಬೆಲೆ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.