
ನವದೆಹಲಿ: ‘ಭಾರತ್ ಟ್ಯಾಕ್ಸಿ’ ಸೇವೆಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಿದ್ದಾರೆ. ಇದು ದೇಶದಲ್ಲಿ ಸಹಕಾರ ತತ್ತ್ವದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಮೊದಲ ವೇದಿಕೆ ಆಗಿದೆ.
ಮುಂದಿನ ಮೂರು ವರ್ಷಗಳಲ್ಲಿ ಭಾರತ್ ಟ್ಯಾಕ್ಸಿ ಸೇವೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ದ್ವಾರಕಾದಿಂದ ಕಾಮಾಕ್ಯದವರೆಗೆ ವಿಸ್ತರಿಸಲಾಗುವುದು ಎಂದು ವೇದಿಕೆಯನ್ನು ಉದ್ಘಾಟಿಸಿದ ಬಳಿಕ ಸಚಿವ ಶಾ ಅವರು ಹೇಳಿದ್ದಾರೆ.
ಭಾರತ್ ಟ್ಯಾಕ್ಸಿ ಜೊತೆ ಸೇರಿರುವ ಚಾಲಕರೊಂದಿಗೆ ಲಾಭವನ್ನು ಹಂಚಿಕೊಳ್ಳಲಾಗುವುದು. ಚಾಲಕರು ಗಳಿಸುವ ಪ್ರತಿ ₹100 ಹಣದಲ್ಲಿ ₹80 ಚಾಲಕರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಉಳಿದ ₹20 ವೇದಿಕೆಯಲ್ಲಿ ಉಳಿಯಲಿದೆ. ಆ ₹20ಕ್ಕೂ ಚಾಲಕರೇ ಮಾಲೀಕರಾಗಿ ಇರುತ್ತಾರೆ ಎಂದಿದ್ದಾರೆ.
ಗ್ರಾಹಕರು, ಈ ವೇದಿಕೆಯ ಮೂಲಕ ಕಾರು, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಸೇವೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಈಗ ದೇಶದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಮಾರುಕಟ್ಟೆಯಲ್ಲಿ ಊಬರ್, ಓಲಾ ಮತ್ತು ರ್‍ಯಾಪಿಡೊ ಪ್ರಾಬಲ್ಯ ಹೊಂದಿವೆ.
ಚಾಲಕರೇ ಮಾಲೀಕರಾಗುವ ಅವಕಾಶವನ್ನು ಈ ವೇದಿಕೆಯು ನೀಡಲಿದೆ. ಇಂತಹ ಅವಕಾಶವನ್ನು ಇತರೆ ಯಾವುದೇ ವೇದಿಕೆ ಒದಗಿಸುತ್ತಿಲ್ಲ ಎಂದು ಶಾ ಅವರು ಹೇಳಿದ್ದಾರೆ.
ಅಮೂಲ್ ಸೇರಿದಂತೆ ದೇಶದ ಎಂಟು ಪ್ರಮುಖ ಸಹಕಾರ ಸಂಘಗಳ ನೆರವಿನೊಂದಿಗೆ ಕಳೆದ ಡಿಸೆಂಬರ್ 2ರಂದು ದೆಹಲಿ–ಎನ್‌ಸಿಆರ್ ಮತ್ತು ಗುಜರಾತ್‌ನಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಯಿತು.
ಸಹಕಾರ ತತ್ತ್ವದ ಆಧಾರದಲ್ಲಿ ಆ್ಯಪ್ ಮೂಲಕ ಟ್ಯಾಕ್ಸಿ ಸೇವೆ ಒದಗಿಸುವ ಜಗತ್ತಿನ ಅತಿದೊಡ್ಡ ವೇದಿಕೆ ಇದಾಗಿದೆ. ಅಲ್ಲದೆ, ಚಾಲಕರ ಮಾಲೀಕತ್ವದ ವಿಶ್ವದ ಅತಿದೊಡ್ಡ ವೇದಿಕೆಯೂ ಹೌದು ಎಂದು ಸಹಕಾರ ಸಚಿವಾಲಯವು ಹೇಳಿದೆ.
ಈ ಸೇವೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಚಾಲಕರು ಈ ವೇದಿಕೆ ಸೇರಿದ್ದಾರೆ, 1 ಲಕ್ಷ ಹೆಚ್ಚು ಬಳಕೆದಾರರು ನೋಂದಣಿ ಆಗಿದ್ದಾರೆ.
ಮುಂಬರುವ ವರ್ಷಗಳಲ್ಲಿ ಸಹಕಾರ ಸಂಘಗಳು ಹೊಸ ವ್ಯವಹಾರಗಳಿಗೆ ಪ್ರವೇಶಿಸಲಿವೆ. ಈ ಚಾಲಕರನ್ನು ‘ಸಾರಥಿಗಳು’ ಎಂದು ಕರೆಯಲಾಗುತ್ತದೆ. ಈ ಚಾಲಕರಿಗೆ ಇಫ್ಕೊ-ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿಯು ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಭಾರತ್ ಟ್ಯಾಕ್ಸಿ ಸೇವೆಯು ಸಾರ್ವಜನಿಕರಿಗೆ ಕೈಗೆಟಕುವ, ಸುರಕ್ಷಿತ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತದೆ ಎಂದಿದ್ದಾರೆ.
ಈ ವೇದಿಕೆಯು ಚಾಲಕರಿಗೆ ಸಾಮಾಜಿಕ ಭದ್ರತೆ ಆರೋಗ್ಯ ವಿಮೆ ಅಪಘಾತ ವಿಮೆ ನಿವೃತ್ತಿ ಉಳಿತಾಯ ಯೋಜನೆಯ ಸವಲತ್ತನ್ನು ನೀಡಲಿದೆ ಅಮಿತ್ ಶಾ ಕೇಂದ್ರ ಸಹಕಾರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.