ADVERTISEMENT

ಭಾರ್ತಿ ಏರ್‌ಟೆಲ್: ನೂತನ ಎಂಡಿ, ಸಿಇಒ ಆಗಿ ಶಾಶ್ವತ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 6:47 IST
Last Updated 19 ಡಿಸೆಂಬರ್ 2025, 6:47 IST
   

ನವದೆಹಲಿ:: ಕಳೆದ ಹದಿಮೂರು ವರ್ಷಗಳಿಂದ ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಗೋಪಾಲ್ ವಿಠ್ಠಲ್ ಅವರು ವ್ಯವಸ್ಥಿತ ಉತ್ತರಾಧಿಕಾರ ಪ್ರಕ್ರಿಯೆಯ ಭಾಗವಾಗಿ, ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಶಾಶ್ವತ್ ಶರ್ಮಾ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕವಾಗಲಿದ್ದಾರೆ.

2024ರ ಅಕ್ಟೋಬರ್‌ನಲ್ಲೇ ಈ ಹುದ್ದೆಗಳಿಗೆ ನಿಯೋಜನೆ ಮಾಡಲಾಗಿತ್ತು. ನಿಯೋಜಿತ ಉತ್ತರಾಧಿಕಾರದ ಅನುಸಾರ, 2026ರ ಜನವರಿ 1ರಿಂದ ಅಧಿಕಾರವಹಿಸಿಕೊಳ್ಳಲಿದ್ದಾರೆ.

ADVERTISEMENT

ಗೋಪಾಲ್ ವಿಠ್ಠಲ್ ಭಾರ್ತಿ ಏರ್‌ಟೆಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ಭಾರ್ತಿ ಏರ್‌ಟೆಲ್ ಮತ್ತು ಅದರ ಎಲ್ಲಾ ಉಪಕಂಪನಿಗಳ ಮೇಲ್ವಿಚಾರಣೆಯನ್ನು ನಿರ್ವಹಿಸಲಿದ್ದಾರೆ.

ಹೊಸ ಹುದ್ದೆಯಲ್ಲಿ ಅವರು, ಕಂಪನಿಯ ಸಮಗ್ರ ಮೇಲ್ವಿಚಾರಣೆಯ ಜೊತೆಗೆ, ಡಿಜಿಟಲ್ ಮತ್ತು ತಂತ್ರಜ್ಞಾನ, ನೆಟ್‌ವರ್ಕ್, ಖರೀದಿ ಹಾಗೂ ಪ್ರತಿಭಾ ನಿರ್ವಹಣೆ ಕ್ಷೇತ್ರಗಳಲ್ಲಿ ಗುಂಪು ಮಟ್ಟದ ಸಹಕಾರವನ್ನು ಉತ್ತೇಜಿಸುವ ಜವಾಬ್ದಾರಿಯನ್ನೂ ಗೋಪಾಲ್ ವಹಿಸಿಕೊಳ್ಳಲಿದ್ದಾರೆ. ಜೊತೆಗೆ, ಸಮೂಹದ ಕಾರ್ಯತಂತ್ರ ರೂಪಿಸುವುದರ ಮೇಲೆ ಹಾಗೂ ಸಂಸ್ಥೆಯನ್ನು ಮುಂದಿನ ಅಭಿವೃದ್ಧಿ ಹಂತಕ್ಕೆ ಸಿದ್ಧಗೊಳಿಸುವ ಭವಿಷ್ಯಮುಖಿ ಕ್ರಮಗಳ ಮೇಲೆ ಗಮನಹರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಭಾರ್ತಿ ಏರ್‌ಟೆಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿರುವ ಶಾಶ್ವತ್ ಶರ್ಮಾ, ನಿಯೋಜಿತ ಸಿಇಒ ಆಗಿದ್ದ ಅವಧಿಯಲ್ಲಿ, ಕಳೆದ ಹನ್ನೆರಡು ತಿಂಗಳುಗಳಲ್ಲಿ ಸಂಸ್ಥೆಯ ವಿವಿಧ ವ್ಯವಹಾರ ಕ್ಷೇತ್ರಗಳಲ್ಲಿ ಗೋಪಾಲ್ ವಿಠ್ಠಲ್ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ ಈ ಹುದ್ದೆಗೆ ಅಗತ್ಯವಾದ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಶಾಶ್ವತ್ ಶರ್ಮಾ ಅವರು ಗೋಪಾಲ್ ವಿಠ್ಠಲ್ ಅವರಿಗೆ ರಿಪೋರ್ಟ್ ಮಾಡುತ್ತಾರೆ.

ಇದರ ಜೊತೆಗೆ, ಪ್ರಸ್ತುತ ಭಾರ್ತಿ ಏರ್‌ಟೆಲ್ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸೌಮೆನ್ ರೇ ಅವರನ್ನು ೇರ್‌ಟೆಲ್ ಸಮೂಕ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.