ADVERTISEMENT

ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ: ಬ್ಯಾಂಕ್‌ ಆಫ್‌ ಅಮೆರಿಕ

ಪಿಟಿಐ
Published 25 ನವೆಂಬರ್ 2020, 11:59 IST
Last Updated 25 ನವೆಂಬರ್ 2020, 11:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತದ ಆರ್ಥಿಕತೆಯು ಎರಡನೇ ತ್ರೈಮಾಸಿಕದಲ್ಲಿ ಚೇತರಿಕೆ ಕಾಣಲಿದೆ. ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇಕಡ (–)23.9ರಷ್ಟು ಆಗಿತ್ತು. ಇದಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಶೇ (–) 7.8ರಷ್ಟು ಇರಲಿದೆ ಎಂದು ಬ್ಯಾಂಕ್ ಆಫ್‌ ಅಮೆರಿಕ ವರದಿ ಹೇಳಿದೆ.

ಇದೇ ತಿಂಗಳ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರವು ಜಿಡಿಪಿ ಬೆಳವಣಿಗೆಯ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಲಿದೆ.

ಆಮದು ವಹಿವಾಟಿನಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಾಣಲಿದೆ. ಇದರಿಂದಾಗಿ ಚಾಲ್ತಿ ಖಾತೆ ಮಿಗತೆಯು ಶೇ 1ರಷ್ಟು ಹೆಚ್ಚಳದೊಂದಿಗೆ ಪ್ರಸಕ್ತ ಹಣಕಾಸು ವರ್ಷ ಅಂತ್ಯವಾಗಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕದಲ್ಲಿನ ಭಾರತದ ಆರ್ಥಿಕ ತಜ್ಞರಾದ ಇಂದ್ರಾಣಿ ಸೇನ್‌ಗುಪ್ತಾ ಮತ್ತು ಆಸ್ತಾ ಗುದ್ವಾನಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

2020–21ರಲ್ಲಿ ಜಿಡಿಪಿ ಬೆಳವಣಿಗೆಯು ಶೇ (–)11ರಷ್ಟು ಇರಲಿದೆ ಎಂದು ಈ ಹಿಂದೆ ಅಂದಾಜು ಮಾಡಲಾಗಿತ್ತು. ಬಳಿಕ ಅದನ್ನು ಪರಿಷ್ಕರಣೆ ಮಾಡಿದ್ದು ಶೇ (–)7.5ರಷ್ಟಿರಲಿದೆ ಎಂದು ಹೇಳಿದ್ದಾರೆ. ಬೇರೆಲ್ಲಾ ವಿಶ್ಲೇಷಕರು ಮಾಡಿರುವ ಅಂದಾಜಿಗಿಂತಲೂ (ಶೇ –9.5ರಿಂದ ಶೇ –11) ಉತ್ತಮವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರೂಪಾಯಿ ಮೌಲ್ಯವು ಒಂದು ಅಮೆರಿಕನ್ ಡಾಲರ್‌ಗೆ ₹ 75 ರಿಂದ ₹ 76ರವರೆಗೂ ಇಳಿಕೆ ಆಗಲು ಬಿಡಲಿದೆ. ಈ ಹಣಕಾಸು ವರ್ಷದಲ್ಲಿ ₹ 5.69 ಲಕ್ಷ ಕೋಟಿ ಮೌಲ್ಯದ ಡಾಲರ್ ಅನ್ನು ಖರೀದಿಸಲಿದೆ ಎನ್ನುವುದು ಅವರ ನಿರೀಕ್ಷೆಯಾಗಿದೆ.

10 ವರ್ಷಗಳಲ್ಲಿ ಇದೇ ಮೊದಲಿಗೆ ಆರ್‌ಬಿಐ ಸಾಕಷ್ಟು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದೆ. ನವೆಂಬರ್‌ 13ಕ್ಕೆ ಕೊನೆಗೊಂಡ ವಾರದಲ್ಲಿ ಆರ್‌ಬಿಐ ಬಳಿ ₹ 42.40 ಲಕ್ಷ ಕೋಟಿ ವಿದೇಶಿ ವಿನಿಮಯ ಮೀಸಲು ಸಂಗ್ರಹ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.