ADVERTISEMENT

ಶ್ರೀಮಂತ ಮಹಿಳೆಗೆ ಎಚ್‌ಸಿಎಲ್‌ನ‌ ನೇತೃತ್ವ

ಪಿಟಿಐ
Published 19 ಜುಲೈ 2020, 6:54 IST
Last Updated 19 ಜುಲೈ 2020, 6:54 IST
ರೋಶನಿ ನಾಡಾರ್ ಮಲ್ಹೋತ್ರಾ
ರೋಶನಿ ನಾಡಾರ್ ಮಲ್ಹೋತ್ರಾ   

2019ರಲ್ಲಿ ಬಿಡುಗಡೆಯಾದ ಐಐಎಫ್‌ಎಲ್‌ ವರದಿಯ ಪ್ರಕಾರ, ದೇಶದ ಅತ್ಯಂತ ಶ್ರೀಮಂತ ಮಹಿಳೆ ರೋಶನಿ ನಾಡಾರ್ ಮಲ್ಹೋತ್ರಾ. ರೋಶನಿ ಅವರ ಒಡೆತನದಲ್ಲಿರುವ ಸಂಪತ್ತಿನ ಒಟ್ಟು ಮೌಲ್ಯ ₹ 36,800 ಕೋಟಿ ಎಂದು ಆ ವರದಿ ಹೇಳಿತ್ತು. ರೋಶನಿ ಅವರು ಈಗ ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಯ ಅಧ್ಯಕ್ಷೆ ಕೂಡ ಹೌದು.

ಇದುವರೆಗೆ ಈ ಹುದ್ದೆಯಲ್ಲಿ ಇದ್ದ ರೋಶನಿ ಅವರ ತಂದೆ ಶಿವ ನಾಡಾರ್ ಅವರು ಈಗ ಅದನ್ನು ತಮ್ಮ ಪುತ್ರಿಯ ಕೈಗೆ ವರ್ಗಾಯಿಸಿದ್ದಾರೆ. ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಭಾರತದ ಐ.ಟಿ. ಕಂಪನಿಯೊಂದರ ಅಧ್ಯಕ್ಷ ಸ್ಥಾನವನ್ನು ಮಹಿಳೆ ಅಲಂಕರಿಸಿರುವುದು ಇದೇ ಮೊದಲು. ರೋಶನಿ ಅವರು ಕಂಪನಿಯ ಉಪಾಧ್ಯಕ್ಷೆಯಾಗಿ 2013ರಿಂದಲೇ ಕೆಲಸ ಆರಂಭಿಸಿದ್ದರು. ಇವರು ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ ಕೂಡ.

ರೋಶನಿ ಅವರು ವಿದ್ಯಾಭ್ಯಾಸ ಮಾಡಿದ್ದು ದೆಹಲಿಯ ವಸಂತ್ ವ್ಯಾಲಿ ಶಾಲೆಯಲ್ಲಿ. ಅಮೆರಿಕದ ಇಲಿನಾಯ್ಸ್‌ನ ವಾರ್ತ್‌ವೆಸ್ಟರ್ನ್‌ ವಿಶ್ವವಿದ್ಯಾಲಯದಿಂದ ‘ಸಂವಹನ’ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಹಾಗೆಯೇ, ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‌ನಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. ಅವರು 2009ರಲ್ಲಿ ಎಚ್‌ಸಿಎಲ್‌ ಕಾರ್ಪೊರೇಷನ್‌ ಸೇರುವ ಮೊದಲು, ಬ್ರಿಟನ್ನಿನ ಸ್ಕೈನ್ಯೂಸ್‌ ಹಾಗೂ ಅಮೆರಿಕದ ಸಿಎನ್‌ಎನ್‌ ವಾಹಿನಿಗಳಲ್ಲಿ ಸುದ್ದಿ ನಿರ್ಮಾಪಕಿ ಆಗಿ ಕೆಲಸ ಮಾಡಿದ್ದರು. ಎಚ್‌ಸಿಎಲ್‌ ಕಾರ್ಪೊರೇಷನ್‌ ಸೇರಿದ ಒಂದು ವರ್ಷದೊಳಗೆ ಅದರ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಅದರ ಸಿಇಒ ಕೂಡ ಆದರು.

ADVERTISEMENT

‘ರೋಷನಿ ಅವರು ಉದ್ದೇಶ, ಪ್ರೀತಿ ಮತ್ತು ಅಭಿಮಾನದಿಂದ ಸಂಸ್ಥೆಯನ್ನು ಮುನ್ನಡೆಸುತ್ತಾರೆ. ಅವರ ನೇತೃತ್ವದಲ್ಲಿ ಸಂಸ್ಥೆಯು ಯಶಸ್ಸನ್ನು ಕಾಣುತ್ತದೆ ಎಂಬ ಭರವಸೆ ನನಗಿದೆ’ ಎಂದು ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ಮಾಜಿ ಸಿಇಒವಿನೀತ್ ನಾಯರ್ ಹೇಳಿದ್ದಾರೆ.

ರೋಶನಿ ಅವರು ಶಿಖರ್ ಮಲ್ಹೋತ್ರಾ ಅವರನ್ನು ಮದುವೆಯಾಗಿದ್ದಾರೆ. ದಂಪತಿಗೆ ಅರ್ಮಾನ್‌ ಮತ್ತು ಜಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಶಿಖರ್ ಅವರು ಎಚ್‌ಸಿಎಲ್‌ ಕಾರ್ಪೊರೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ. ಫೋಬ್ಸ್‌ ಪತ್ರಿಕೆ 2019ರಲ್ಲಿ ಬಿಡುಗಡೆ ಮಾಡಿದ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ರೋಶನಿ ಅವರು 54ನೆಯ ಸ್ಥಾನದಲ್ಲಿ ಇದ್ದರು.ರೋಶನಿ ಅವರು ಪರಿಸರ ಪರ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.