ADVERTISEMENT

ಬಿಎಸ್‌ಎನ್‌ಎಲ್‌: ₹47 ಸಾವಿರ ಕೋಟಿ ಬಂಡವಾಳ ವೆಚ್ಚ

ಪಿಟಿಐ
Published 14 ಆಗಸ್ಟ್ 2025, 15:20 IST
Last Updated 14 ಆಗಸ್ಟ್ 2025, 15:20 IST
ಬಿಎಸ್‌ಎನ್‌ಎಲ್‌
ಬಿಎಸ್‌ಎನ್‌ಎಲ್‌   

ನವದೆಹಲಿ: ಭಾರತ್ ಸಂಚಾರ ನಿಗಮ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್‌) ಜಾಲವನ್ನು ಉತ್ತಮಪಡಿಸಲು ₹47 ಸಾವಿರ ಕೋಟಿಯ ಬಂಡವಾಳ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ದೂರಸಂಪರ್ಕ ಇಲಾಖೆ ಹೇಳಿದೆ.

ಕಳೆದ ವರ್ಷ 4ಜಿ ಮೊಬೈಲ್‌ ಸೇವೆಗಳನ್ನು ಒದಗಿಸಲು 1 ಲಕ್ಷ ಟವರ್ ಸ್ಥಾಪಿಸಲಾಗಿತ್ತು. ಇದಕ್ಕಾಗಿ ಬಿಎಸ್‌ಎನ್‌ಎಲ್‌ ₹25 ಸಾವಿರ ಕೋಟಿ ವ್ಯಯಿಸಿತ್ತು. ಈಗ ₹47 ಸಾವಿರ ಕೋಟಿ ಬಂಡವಾಳ ವೆಚ್ಚ ಮಾಡಲು ಯೋಜಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉಲ್ಲೇಖಿಸಿ ಇಲಾಖೆಯು ‘ಎಕ್ಸ್’ ಮೂಲಕ ತಿಳಿಸಿದೆ.

ಮುಂದಿನ ವರ್ಷದ ವೇಳೆಗೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಮೊಬೈಲ್‌ ಸೇವೆಗಳ ವಹಿವಾಟಿನಲ್ಲಿ ಶೇ 50ರಷ್ಟು ಬೆಳವಣಿಗೆ ಸಾಧಿಸಬೇಕು ಎಂದು ಬಿಎಸ್‌ಎನ್‌ಎಲ್‌ನ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ADVERTISEMENT

ಕಳೆದ ತಿಂಗಳು ಬಿಎಸ್‌ಎನ್‌ಎಲ್‌ ವಲಯ ಮತ್ತು ವ್ಯಾಪಾರ ಘಟಕದ ಮುಖ್ಯಸ್ಥರ ಜೊತೆ ಸಿಂಧಿಯಾ ಪರಿಶೀಲನಾ ಸಭೆ ನಡೆಸಿದ್ದರು.

ಬಿಎಸ್‌ಎನ್‌ಎಲ್‌ ಕಂಪನಿಯು ಪ್ರತಿ ಗ್ರಾಹಕನಿಂದ ತಿಂಗಳೊಂದರಲ್ಲಿ ಪಡೆಯುತ್ತಿರುವ ಸರಾಸರಿ ವರಮಾನವು (ಎಆರ್‌ಪಿಯು) ವಲಯದಿಂದ ವಲಯಕ್ಕೆ ಭಿನ್ನವಾಗಿದೆ. ಇದು ₹40ರಿಂದ ಆರಂಭವಾಗಿ ₹175ಕ್ಕಿಂತ ಹೆಚ್ಚಿನ ಮಟ್ಟದವರೆಗೆ ಇದೆ. ಗ್ರಾಹಕರಿಗೆ ಉತ್ತಮವಾದ ಸೇವೆ ನೀಡಿ, ಹೆಚ್ಚಿನ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡು ವರಮಾನ ಹೆಚ್ಚಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಆದರೆ, ಜಿಯೊ ಕಂಪನಿಯ ಎಆರ್‌ಪಿಯು ₹208ರಷ್ಟು, ಏರ್‌ಟೆಲ್‌ ಕಂಪನಿಯ ಎಆರ್‌ಪಿಯು ₹250ರಷ್ಟು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.