ADVERTISEMENT

ಶೀಘ್ರವೇ ಲೆಕ್ಕ ಪರಿಶೋಧನೆ: ಹೂಡಿಕೆದಾರರಿಗೆ ಬೈಜೂಸ್‌ ಭರವಸೆ

ಪಿಟಿಐ
Published 26 ಜೂನ್ 2023, 13:05 IST
Last Updated 26 ಜೂನ್ 2023, 13:05 IST
ಬೈಜೂಸ್‌
ಬೈಜೂಸ್‌    

ನವದೆಹಲಿ: ದೀರ್ಘಾವಧಿಯಿಂದ ಬಾಕಿ ಇರುವ ಲೆಕ್ಕ ಪರಿಶೋಧನೆಯನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಬೈಜೂಸ್‌ ಕಂಪನಿಯು ಹೂಡಿಕೆದಾರರಿಗೆ ಭರವಸೆ ನೀಡಿದೆ ಎಂದು ಮೂಲಗಳು ಹೇಳಿವೆ.

2021–22ನೇ ಹಣಕಾಸು ವರ್ಷದ ಲೆಕ್ಕಪರಿಶೋಧನೆಯನ್ನು ಸೆಪ್ಟೆಂಬರ್ ಒಳಗಾಗಿ ಹಾಗೂ 2022–23ನೇ ಹಣಕಾಸು ವರ್ಷದ ಲೆಕ್ಕಪರಿಶೋಧನೆಯನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುವುದಾಗಿ ಹೂಡಿಕೆದಾರರಿಗೆ ಕಂಪನಿ ತಿಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಷೇರುದಾರರೊಂದಿಗೆ ಶನಿವಾರ ದೂರವಾಣಿ ಮೂಲಕ ಮಾತನಾಡಿರುವ ಬೈಜೂಸ್ ಸಿಇಒ ಬೈಜು ರವೀಂದ್ರನ್‌, ತಮ್ಮ ಹಿಂದಿನ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಕಲಿಕೆಯು ತಪ್ಪು ಹೆಜ್ಜೆಗಳನ್ನು ಇಡದಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಆಡಳಿತ ಮಂಡಳಿಯ ಸದಸ್ಯರು ರಾಜೀನಾಮೆ ನೀಡಿರುವುದನ್ನು ರವೀಂದ್ರನ್‌ ಒಪ್ಪಿಕೊಂಡಿದ್ದಾರೆ. ಕಂಪನಿಯು ಅವರ ರಾಜೀನಾಮೆಯನ್ನು ಒಪ್ಪಿಕೊಂಡಿಲ್ಲ. ಆದರೆ, ಅದಕ್ಕೂ ಮೊದಲೇ ಆ ಮಾಹಿತಿಯು ಸೋರಿಕೆಯಾಗಿದೆ ಎಂದು ಷೇರುದಾರರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಸಮೂಹದ ಸಿಎಫ್‌ಒ ಅಜಯ ಗೋಯಲ್ ಅವರನ್ನು ಷೇರುದಾರರಿಗೆ ಪರಿಚಯಿಸಿದ್ದಾರೆ. 2022 ಮತ್ತು 2023ನೆ ಹಣಕಾಸು ವರ್ಷದ ಲೆಕ್ಕಪರಿಶೋಧನೆಯನ್ನು ಕ್ರಮವಾಗಿ ಸೆಪ್ಟೆಂಬರ್ ಮತ್ತು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸುವ ಬದ್ಧತೆಯನ್ನು ಅವರು ನೀಡಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಒಬ್ಬರು ತಿಳಿಸಿದ್ದಾರೆ.

ಹಣಕಾಸು ಮಾಹಿತಿ ನೀಡುವಲ್ಲಿ ವಿಳಂಬ ಮಾಡಿರುವ ಕಾರಣಕ್ಕಾಗಿ ಡೆಲಾಯ್ಟ್‌ ಕಂಪನಿಯು ಬೈಜೂಸ್‌ನ ಲೆಕ್ಕಪರಿಶೋಧಕ ಸ್ಥಾನದಿಂದ ಹಿಂದೆ ಸರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.