ADVERTISEMENT

ಯುಪಿಐ ಬಳಕೆಗೆ ಉತ್ತೇಜನ: ₹1,500 ಕೋಟಿ ನಿಗದಿ

ಪಿಟಿಐ
Published 19 ಮಾರ್ಚ್ 2025, 15:37 IST
Last Updated 19 ಮಾರ್ಚ್ 2025, 15:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ದೇಶದಲ್ಲಿ ಸಣ್ಣ ಮೊತ್ತದ ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ಉತ್ತೇಜನಕ್ಕಾಗಿ ₹1,500 ಕೋಟಿ ನೀಡಲು ಒಪ್ಪಿಗೆ ನೀಡಿದೆ.

ಯುಪಿಐ ಮೂಲಕ ₹2 ಸಾವಿರಕ್ಕಿಂತ ಕಡಿಮೆ ಮೊತ್ತ ಪಾವತಿಸುವವರಿಗೆ ಉತ್ತೇಜನ ನೀಡುವುದು ಇದರ ಮೂಲ ಗುರಿಯಾಗಿದೆ. ಗ್ರಾಹಕರು ವರ್ತಕರಿಗೆ ಪಾವತಿಸುವ ಮೊತ್ತದಲ್ಲಿ ನೀಡಬೇಕಿರುವ ಮರ್ಚಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌) ಶುಲ್ಕವನ್ನು ಸರ್ಕಾರವೇ ಭರಿಸಲಿದೆ.

ಗ್ರಾಹಕರಿಂದ ವರ್ತಕರಿಗೆ ಭೀಮ್‌–ಯುಪಿಐ ಮೂಲಕ ಪಾವತಿಸುವ ಕಡಿಮೆ ಮೊತ್ತಕ್ಕೆ ಈ ಸೌಲಭ್ಯ ದೊರೆಯಲಿದೆ. 2024–25ನೇ ಆರ್ಥಿಕ ವರ್ಷಕ್ಕೆ ಈ ಯೋಜನೆಯು ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ಸಣ್ಣ ವರ್ತಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ₹2 ಸಾವಿರಕ್ಕಿಂತ ಕಡಿಮೆ ಮೊತ್ತದ ಪ್ರತಿ ಪಾವತಿಗೆ ಶೇ 0.15ರಷ್ಟು ಪ್ರೋತ್ಸಾಹಧನ ಲಭಿಸಲಿದೆ. ಬ್ಯಾಂಕ್‌ಗಳು ವರ್ತಕರ ಖಾತೆಗೆ ಈ ಪ್ರೋತ್ಸಾಹ ಧನವನ್ನು ನೇರವಾಗಿ ವರ್ಗಾವಣೆ ಮಾಡಲಿವೆ ಎಂದು ಹೇಳಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಯುಪಿಐ ಮೂಲಕ ಸಣ್ಣ ಮೊತ್ತ ‍ಪಾವತಿಗೆ ಉತ್ತೇಜನ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. 2025–26ನೇ ಆರ್ಥಿಕ ವರ್ಷಕ್ಕೂ ಸರ್ಕಾರವು ₹1,500 ಕೋಟಿ ಮೀಸಲಿಡಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.