ADVERTISEMENT

ಚೀನಾ ಸರಕು ಬಹಿಷ್ಕಾರ: ₹1.29 ಲಕ್ಷ ಕೋಟಿ ಮೌಲ್ಯದ ಆಮದು ಮೇಲೆ ಪರಿಣಾಮ ಸಾಧ್ಯತೆ

ಪಿಟಿಐ
Published 19 ಜೂನ್ 2020, 7:07 IST
Last Updated 19 ಜೂನ್ 2020, 7:07 IST
ಚೀನಾ ಸರಕುಗಳಿಗೆ ಬಹಿಷ್ಕಾರ  (ಕೃಪೆ: ಎಎಫ್‌ಪಿ)
ಚೀನಾ ಸರಕುಗಳಿಗೆ ಬಹಿಷ್ಕಾರ (ಕೃಪೆ: ಎಎಫ್‌ಪಿ)   

ಕೋಲ್ಕತ್ತ: ಲಡಾಖ್ ಗಡಿ ಘರ್ಷಣೆ ನಂತರ ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸುವ ಕೂಗು ಮತ್ತಷ್ಟು ಹೆಚ್ಚಾಗಿದೆ. ಅದೇ ವೇಳೆ ವಾರ್ಷಿಕವಾಗಿ ಚೀನಾದಿಂದ 7400 ಕೋಟಿ ಅಮೆರಿಕನ್ ಡಾಲರ್ (₹5.63 ಲಕ್ಷ ಕೋಟಿ) ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಮಾರಾಟವನ್ನುನಿರ್ಬಂಧಿಸಲು ನಿರ್ದೇಶನ ನೀಡುವಂತೆ ವ್ಯಾಪಾರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಚೀನಾದಿಂದ ಒಟ್ಟು ಆಮದು ವಸ್ತುಗಳ ಪೈಕಿ ಚಿಲ್ಲರೆ ವ್ಯಾಪಾರಿಗಳು ಸುಮಾರು 1700 ಕೋಟಿ ಡಾಲರ್ ಮೌಲ್ಯದ (₹1.29 ಲಕ್ಷ ಕೋಟಿ) ಸರಕುಗಳನ್ನು ಮಾರಾಟ ಮಾಡುತ್ತಾರೆ. ಇದರಲ್ಲಿ ಹೆಚ್ಚಾಗಿ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಮೊಬೈಲ್, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಸರಕುಗಳು ಮತ್ತು ಸೌಂದರ್ಯವರ್ಧಕಗಳು ಸೇರಿವೆ. ಇವುಗಳಿಗೆ ಪರ್ಯಾಯವಾಗಿ ಭಾರತೀಯ ಉತ್ಪನ್ನಗಳನ್ನು ಬಳಸಬಹುದು ಎಂದು ರಾಷ್ಟ್ರೀಯ ವ್ಯಾಪಾರ ಸಂಸ್ಥೆ ತಿಳಿಸಿದೆ.

ನಾವು, 'ಅಖಿಲ ಭಾರತ ವ್ಯಾಪರ್ ಮಂಡಲ್ ಫೆಡರೇಶನ್‌' ನಲ್ಲಿ, ನಮ್ಮ ಸದಸ್ಯರಿಗೆ ತಮ್ಮ ಚೀನೀ ಉತ್ಪನ್ನಗಳ ದಾಸ್ತಾನುಗಳನ್ನು ತೆರವುಗೊಳಿಸಲು ಮತ್ತು ಹೊಸತಾಗಿ ಆರ್ಡರ್ ನೀಡುವುದನ್ನು ತಡೆಯಲು ಸಲಹೆ ನೀಡುತ್ತಿದ್ದೇವೆ. ಇ-ಕಾಮರ್ಸ್ ಕಂಪೆನಿಗಳು ಚೀನಾದ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸುವಂತೆ ನಾವು ಸರ್ಕಾರವನ್ನು ಕೋರುತ್ತಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕೆ.ಬನ್ಸಾಲ್ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಚೀನಾದ ಸರಕುಗಳ ವಹಿವಾಟನ್ನು ಸಾಧ್ಯವಾದಷ್ಟು ದೂರವಿಡುವಂತೆ ಅದರ ಸದಸ್ಯರಿಗೆ ತಿಳಿಸಲಾಗಿದೆ ಎಂದು ಪಶ್ಚಿಮ ಬಂಗಾಳ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಸುಶೀಲ್ ಪೋದ್ದಾರ್ ಹೇಳಿದ್ದಾರೆ.

ಮತ್ತೊಂದು ರಾಷ್ಟ್ರೀಯ ವ್ಯಾಪಾರಿಗಳ ಸಂಸ್ಥೆ, ದಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ), ಚೀನಾದ ಸರಕುಗಳ ಬಹಿಷ್ಕಾರದ ವಿರುದ್ಧ ತನ್ನ ಚಳವಳಿಯನ್ನು 'ಭಾರತೀಯ ಸಾಮನ್-ಹಮರಾ ಅಭಿಮಾನ್' ಅಭಿಯಾನದಡಿಯಲ್ಲಿ ಹೆಚ್ಚಿಸಲು ನಿರ್ಧರಿಸಿದೆ.

ಆದಾಗ್ಯೂ, 3,000 ಚೀನೀ ಉತ್ಪನ್ನಗಳನ್ನು ಒಳಗೊಂಡ 450 ಕ್ಕೂ ಹೆಚ್ಚುಸರಕುಗಳ ಪಟ್ಟಿಯನ್ನು ಈ ಸಂಸ್ಥೆಬಿಡುಗಡೆ ಮಾಡಿದೆ. ಸಿಎಐಟಿ ಹಲವಾರು ಖ್ಯಾತವ್ಯಕ್ತಿಗಳಿಗೆ ಮುಕ್ತ ಪತ್ರವೊಂದನ್ನು ಬರೆದಿದ್ದು,ಚೀನಾ ಉತ್ಪನ್ನಗಳನ್ನುಅನುಮೋದಿಸುವುದು ನಿಲ್ಲಿಸುವಂತೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.