ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಜೂನ್ ತ್ರೈಮಾಸಿಕದಲ್ಲಿ ₹4,752 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹3,905 ಕೋಟಿ ಲಾಭ ಆಗಿತ್ತು.
ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ 22ರಷ್ಟು ಹೆಚ್ಚಳವಾಗಿದೆ. ಎನ್‌ಪಿಎ ಪ್ರಮಾಣ ಕಡಿಮೆ ಆಗಿರುವುದು ಲಾಭ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬ್ಯಾಂಕ್ ಗುರುವಾರ ಷೇರುಪೇಟೆಗೆ ತಿಳಿಸಿದೆ.
ಈ ಬಾರಿ ಒಟ್ಟು ವರಮಾನವು ₹38,063 ಕೋಟಿಯಾಗಿದೆ. ಕಳೆದ ಬಾರಿ ಇದು ₹34,020 ಕೋಟಿಯಷ್ಟಿತ್ತು. ಬಡ್ಡಿ ಮೂಲಕ ಗಳಿಕೆಯು ₹31,003 ಕೋಟಿಯಾಗಿದೆ. ಕಾರ್ಯಾಚರಣೆ ಲಾಭವು ₹8,554 ಕೋಟಿಗೆ ಹೆಚ್ಚಳವಾಗಿದೆ.
ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಜಿಎನ್‌ಪಿಎ) ಶೇ 4.14ರಿಂದ ಶೇ 2.69ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 1.24ರಿಂದ ಶೇ 0.63ಕ್ಕೆ ತಗ್ಗಿದೆ.
‘ಬ್ಯಾಂಕ್‌ನ ಒಟ್ಟು ಜಾಗತಿಕ ವ್ಯವಹಾರವು ಜೂನ್ ತ್ರೈಮಾಸಿಕದಲ್ಲಿ ಶೇ 10.98ರಷ್ಟು ಬೆಳವಣಿಗೆ ಕಂಡಿದ್ದು, ₹25,63,984 ಕೋಟಿಗೆ ತಲುಪಿದೆ. ಠೇವಣಿಯಲ್ಲಿ ಶೇ 9.92ರಷ್ಟು ಏರಿಕೆ ದಾಖಲಿಸಿದ್ದು, ₹14,67,655 ಕೋಟಿ ಆಗಿದೆ. ಸಾಲದ ನೀಡಿಕೆ ₹10,96,329 ಕೋಟಿಯಷ್ಟಾಗಿದ್ದು, ಶೇ 12.42ರಷ್ಟು ಹೆಚ್ಚಳವಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.