ADVERTISEMENT

ವಿಲಾಸಿ ಕಾರು, ಚಿನ್ನಾಭರಣ ಅಗ್ಗ

ಜಿಎಸ್‌ಟಿ ಲೆಕ್ಕ ಹಾಕುವಾಗ ‘ಟಿಸಿಎಸ್‌’ ಕೈಬಿಡುವ ನಿರ್ಧಾರ

ಪಿಟಿಐ
Published 10 ಮಾರ್ಚ್ 2019, 19:40 IST
Last Updated 10 ಮಾರ್ಚ್ 2019, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ವಿಲಾಸಿ ಕಾರು ಮತ್ತು ದುಬಾರಿ ದರದಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ನೆಮ್ಮದಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

ದುಬಾರಿ ಕಾರು ಮತ್ತು ಚಿನ್ನಾಭರಣ ಖರೀದಿಸುವ ಸಂದರ್ಭದಲ್ಲಿ ಜಿಎಸ್‌ಟಿ ಲೆಕ್ಕ ಹಾಕುವಾಗ ಸರಕುಗಳ ಮೌಲ್ಯದಿಂದ ಮೂಲದಲ್ಲಿಯೇ ತೆರಿಗೆ ಸಂಗ್ರಹವನ್ನು (ಟಿಸಿಎಸ್‌) ಕೈಬಿಡಲಾಗುವುದು ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ಹೇಳಿದೆ.

ಹೀಗಾಗಿ ವಿಲಾಸಿ ಕಾರು ಮತ್ತು ಚಿನ್ನಾಭರಣ ಖರೀದಿಯು ತುಸು ಅಗ್ಗವಾಗಲಿದೆ. ಆದಾಯ ತೆರಿಗೆ ಕಾಯ್ದೆಯಡಿ ₹ 10 ಲಕ್ಷಕ್ಕಿಂತ ಅಧಿಕ ಮೊತ್ತದ ವಾಹನ ಖರೀದಿ, ಹಾಗೂ ₹ 5 ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ₹ 2 ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನ ಖರೀದಿಗೆ ಶೇ 1 ರಷ್ಟು ‘ಟಿಸಿಎಸ್‌’ ವಿಧಿಸಲಾಗುತ್ತದೆ.

ADVERTISEMENT

‘ಟಿಸಿಎಸ್‌’ ಅನ್ವಯಿಸುವ ಸರಕುಗಳ ಜಿಎಸ್‌ಟಿ ಲೆಕ್ಕಹಾಕುವಾಗ ‘ಟಿಸಿಎಸ್‌’ ಮೊತ್ತವನ್ನೂ ಸೇರಿಸಬೇಕು ಎಂದು 2018ರ ಡಿಸೆಂಬರ್‌ನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ‘ಸಿಬಿಐಸಿ’ ಹೇಳಿತ್ತು. ಇದನ್ನು ಕೈಬಿಡಬೇಕು ಎಂದು ವಿವಿಧ ವಲಯಗಳಿಂದ ಬೇಡಿಕೆ ಕೇಳಿ ಬಂದಿತ್ತು.

‘ಟಿಸಿಎಸ್‌’, ಸರಕುಗಳ ಮೇಲಿನ ತೆರಿಗೆ ಅಲ್ಲ. ದುಬಾರಿ ಸರಕುಗಳ ಮಾರಾಟದಿಂದ ಬರುವ ‘ಸಾಧ್ಯತಾ ಆದಾಯ’ಕ್ಕೆ ವಿಧಿಸುವ ಮಧ್ಯಂತರ ತೆರಿಗೆಯಾಗಿದೆ. ಇದನ್ನು ಅಂತಿಮ ಆದಾಯ ತೆರಿಗೆ ಹೊಣೆಗಾರಿಕೆಯಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ‘ಸಿಬಿಡಿಟಿ’ ವಿವರಣೆ ನೀಡಿದೆ.

1961ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಮಧ್ಯಂತರ ತೆರಿಗೆಯನ್ನು ಜಿಎಸ್‌ಟಿಗೆ ಸೇರಿಸಲು ಬರುವುದಿಲ್ಲ ಎಂದೂ ‘ಸಿಬಿಐಸಿ’ ತಿಳಿಸಿದೆ.

‘ಈ ಸ್ಪಷ್ಟನೆಯಿಂದ ವಾಹನ ಉದ್ಯಮಕ್ಕೆ ತುಸು ನೆಮ್ಮದಿ ದೊರೆತಂತಾಗಿದೆ’ ಎಂದು ಅರ್ನ್ಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಇಂಡಿಯಾ ಸಂಸ್ಥೆಯ ತೆರಿಗೆ ಪಾಲುದಾರ ಅಭಿಷೇಕ್‌ ಜೈನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.