
ನವದೆಹಲಿ: ಯುರೋಪಿಯನ್ ಒಕ್ಕೂಟದ(ಇಯು) ಕೆಲವು ಲೋಹಗಳ ಮೇಲಿನ ಕಾರ್ಬನ್ ತೆರಿಗೆ ಗುರುವಾರದಿಂದ(ಜನವರಿ 1) ಜಾರಿಗೆ ಬರಲಿದ್ದು, ಇದು ಭಾರತದ ಉಕ್ಕು ರಫ್ತಿನ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಚಿಂತಕರ ಚಾವಡಿ ಜಿಟಿಆರ್‌ಐ ತಿಳಿಸಿದೆ.
27 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟವು ಉತ್ಪಾದನಾ ಪ್ರಕ್ರಿಯೆಯಲ್ಲಿ ಇಂಗಾಲವನ್ನು ಹೊರಸೂಸುವ ಸರಕುಗಳ ಮೇಲೆ ಈ ತೆರಿಗೆಯನ್ನು ವಿಧಿಸುತ್ತಿದೆ.
ಉಕ್ಕಿನ ಉತ್ಪನ್ನಗಳಲ್ಲಿ ಇಂಗಾಲದ ಹೊರಸೂಸುವಿಕೆ ಅಧಿಕವಾಗಿದ್ದು, ಅದೇ ರೀತಿ, ಅಲ್ಯೂಮಿನಿಯಂ, ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ವಿದ್ಯುತ್ ಇಂಗಾಲದ ಹೊರೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಆದ್ದರಿಂದ, ಸಿಬಿಎಎಂ(ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ) ವೆಚ್ಚವನ್ನು ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಭಾರತದ ಲೋಹಗಳ ರಫ್ತುದಾರರು ತಮ್ಮ ಉತ್ಪನ್ನಗಳ ಬೆಲೆಯನ್ನು ಶೇ 15-22ರಷ್ಟು ಕಡಿತಗೊಳಿಸಬೇಕಾಗಬಹುದು. ಅದರಿಂದ, ಯುರೋಪಿಯನ್ ಒಕ್ಕೂಟದ ಆಮದುದಾರರು ಸಿಬಿಎಎಂ ವೆಚ್ಚದ ತೆರಿಗೆಯನ್ನು ಸರಿದೂಗಿಸಲು ಸಾಧ್ಯವಾಗುತ್ತದೆ ಎಂದು ವರದಿ ತಿಳಿಸಿದೆ.
ಭಾರತೀಯ ರಫ್ತುದಾರರು ಯುರೋಪಿಯನ್ ಒಕ್ಕೂಟದ ಆಮದುದಾರರಿಗೆ ನೇರವಾಗಿ ತೆರಿಗೆ ಪಾವತಿಸುವುದಿಲ್ಲ. ಆಮದುದಾರರು ಕಾರ್ಬನ್ ತೆರಿಗೆಗೆ ಸಂಬಂಧಿಸಿದ ಸಿಬಿಎಎಂ ಸರ್ಟಿಫಿಕೆಟ್ ಪಡೆಯಬೇಕಿರುವುದರಿಂದ ಭಾರತೀಯ ರಫ್ತುದಾರರು ಬೆಲೆ ಕಡಿತ ಮಾಡಬೇಕಿದೆ.
‘ಜನವರಿ 1ರಿಂದ ಯುರೋಪಿಯನ್ ಒಕ್ಕೂಟದ ದೇಶಗಳಿಗೆ ರಫ್ತಾಗುವ ಭಾರತೀಯ ಸ್ಟೀಲ್, ಅಲ್ಯೂಮಿನಿಯಂಗೆ ಕಾರ್ಬನ್ ತೆರಿಗೆ ಅನ್ವಯವಾಗಲಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀ ವಾಸ್ತವ್ ಹೇಳಿದ್ದಾರೆ.
ಸಿಬಿಎಎಂನ ಪರಿಶೀಲನೆಗಳು ವೆಚ್ಚವನ್ನು ತೀವ್ರವಾಗಿ ಹೆಚ್ಚಿಸುತ್ತವೆ. ಇದು ಅನೇಕ ಸಣ್ಣ ರಫ್ತುದಾರರನ್ನು ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹೊರಗೆ ತಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.