ADVERTISEMENT

ಟಾಟಾ ಸನ್ಸ್‌ ತೆಕ್ಕೆಗೆ ಏರ್ ಇಂಡಿಯಾ: ಬಿಡ್‌ ಅನುಮೋದನೆ ವರದಿ ನಿರಾಕರಿಸಿದ ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2021, 10:08 IST
Last Updated 1 ಅಕ್ಟೋಬರ್ 2021, 10:08 IST
ಏರ್‌ ಇಂಡಿಯಾ ವಿಮಾನ
ಏರ್‌ ಇಂಡಿಯಾ ವಿಮಾನ   

ನವದೆಹಲಿ: ದೇಶದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ 'ಏರ್‌ ಇಂಡಿಯಾ' ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್‌ ಸಲ್ಲಿಸಿರುವ ಬಿಡ್‌ಗೆ ಅನುಮೋದನೆ ದೊರೆತಿರುವುದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಹೇಳಿದೆ.

ಸಾಲದ ಸುಳಿಯಲ್ಲಿರುವ ಏರ್‌ ಇಂಡಿಯಾದ ನಿರ್ವಹಣೆಗೆ ‘ಟಾಟಾ ಸನ್ಸ್‌’ ಸಲ್ಲಿಸಿರುವ ಬಿಡ್ ಅನ್ನು ಶಿಫಾರಸು ಮಾಡಿ ಸಲ್ಲಿಸಲಾಗಿರುವ ಪ್ರಸ್ತಾಪವನ್ನು ಸಚಿವರ ಸಮಿತಿ ಅಂಗೀಕರಿಸಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿತ್ತು.

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ಈ ಬೆಳವಣಿಗೆಗಳನ್ನು ತಳ್ಳಿ ಹಾಕಿದ್ದು, 'ಏರ್‌ ಇಂಡಿಯಾದ ಹೂಡಿಕೆ ಹಿಂತೆಗೆತಕ್ಕೆ(ಮಾರಾಟ) ಸಂಬಂಧಿಸಿದಂತೆ ಹಣಕಾಸು ಬಿಡ್‌ಗಳಿಗೆ ಭಾರತ ಸರ್ಕಾರವು ಅನುಮೋದನೆ ನೀಡಿರುವ ಕುರಿತು ಮಾಧ್ಯಮಗಳ ವರದಿಗಳು ತಪ್ಪಾಗಿವೆ. ಸರ್ಕಾರವು ನಿರ್ಧಾರ ಕೈಗೊಂಡ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತದೆ' ಎಂದು ಟ್ವೀಟಿಸಿದ್ದಾರೆ.

ADVERTISEMENT

ಟಾಟಾ ಸನ್ಸ್‌ನ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಹಣಕಾಸು ಸಚಿವಾಲಯದ ವಕ್ತಾರರಿಂದ ರಾಯಿಟರ್ಸ್‌ ಸಂದೇಶಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಹಾಗೂ ಏರ್‌ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ನಷ್ಟದ ಸುಳಿಯಲ್ಲಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಮುಂದಾಗಿದೆ. ಅಧಿಕಾರಿಗಳ ಪ್ರಕಾರ, ಸರ್ಕಾರವು ಪ್ರತಿ ನಿತ್ಯ ಏರ್‌ ಇಂಡಿಯಾ ನಿರ್ವಹಣೆಗಾಗಿ ಸುಮಾರು ₹20 ಕೋಟಿ ವ್ಯಯಿಸುತ್ತಿದೆ ಹಾಗೂ ಈವರೆಗೂ ಅಂದಾಜು ₹70,000 ಕೋಟಿ ನಷ್ಟಕ್ಕೆ ಒಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.