ADVERTISEMENT

ಎಕ್ಸೈಸ್ ಸುಂಕ ಇನ್ನೊಮ್ಮೆ ಕಡಿತ?

ಅನ್ನಪೂರ್ಣ ಸಿಂಗ್
Published 25 ಫೆಬ್ರುವರಿ 2022, 19:30 IST
Last Updated 25 ಫೆಬ್ರುವರಿ 2022, 19:30 IST
ಕಚ್ಚಾ ತೈಲ
ಕಚ್ಚಾ ತೈಲ   

ನವದೆಹಲಿ: ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಾಗಿರುವ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರ ಸರ್ಕಾರ ಇನ್ನೊಮ್ಮೆ ತಗ್ಗಿಸುವ ಸಾಧ್ಯತೆ ಇದೆ.

ಕಚ್ಚಾ ತೈಲದ ಬೆಲೆ ಹಾಗೂ ದೇಶದ ಚಿಲ್ಲರೆ ಹಣದುಬ್ಬರ ದರದ ನಡುವೆ ನೇರ ಸಂಬಂಧ ಇದೆ. ತೈಲ ದರ ಹೆಚ್ಚಾದರೆ ಸರಕು ಸಾಗಣೆ ವೆಚ್ಚ ಕೂಡ ಜಾಸ್ತಿಯಾಗಿ, ಬಹುತೇಕ ಉತ್ಪನ್ನಗಳ ಬೆಲೆ ದುಬಾರಿ ಆಗುತ್ತದೆ. ಜನವರಿಯಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರವು ಆರ್‌ಬಿಐ ನಿಗದಿ ಮಾಡಿ ಕೊಂಡಿರುವ ಗರಿಷ್ಠ ಮಟ್ಟವನ್ನು ಮೀರಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಜಾಸ್ತಿ ಆಗಿದ್ದರೂ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತ 111 ದಿನಗಳಿಂದ ಹೆಚ್ಚಿಸಿಲ್ಲ. ಮಾರುಕಟ್ಟೆ ತಜ್ಞರ ಪ್ರಕಾರ, ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಈಗ ಆಗಿರುವ ಹೆಚ್ಚಳದ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಲೀಟರ್‌ಗೆ ₹ 10ರಷ್ಟು ಜಾಸ್ತಿ ಆಗಿರಬೇಕಿತ್ತು.

ADVERTISEMENT

ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ಕಂಪನಿಗಳು ತೈಲ ಬೆಲೆಯನ್ನು ಜಾಸ್ತಿ ಮಾಡಬಹುದು. ‘ಆದರೆ, ಎಕ್ಸೈಸ್‌ ಸುಂಕವನ್ನು ಕಡಿಮೆ ಮಾಡಿ, ಬೆಲೆ ಹೆಚ್ಚಳದ ಹೊರೆಯನ್ನು ತಗ್ಗಿಸದೆ ಇದ್ದರೆ ಪರಿಣಾಮವು ಭಾರಿ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಸುಂಕದ ವಿಚಾರದಲ್ಲಿ ಕೇಂದ್ರವು ಕೆಲವು ಕ್ರಮಗಳನ್ನು ಕೈಗೊಳ್ಳಬಹುದು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.