ನಿತಿನ್ ಗಡ್ಕರಿ –ಪಿಟಿಐ ಚಿತ್ರ
ನವದೆಹಲಿ: ದೇಶದ ಹೆದ್ದಾರಿಗಳ ಮೂಲಸೌಕರ್ಯ ಬಲವರ್ಧನೆಗೆ ಕೇಂದ್ರ ಸರ್ಕಾರವು ಮುಂದಿನ ಎರಡು ವರ್ಷಗಳಲ್ಲಿ ₹10 ಲಕ್ಷ ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಹೆದ್ದಾರಿಗಳನ್ನು ಮೇಲ್ದರ್ಜೇರಿಸಲು ನಿರ್ಧರಿಸಿದೆ. ಬಳಕೆದಾರರಿಗೆ ವಿಶ್ವದರ್ಜೆಯ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ಮುಖ್ಯವಾಗಿ ಈಶಾನ್ಯ ಭಾರತ ಭಾಗ ಮತ್ತು ದೇಶದ ಗಡಿ ಭಾಗದಲ್ಲಿರುವ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.
ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಹೆದ್ದಾರಿಗಳ ನಿರ್ವಹಣಾ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಈಶಾನ್ಯ ಭಾರತ ಭಾಗದಲ್ಲಿ ₹3.73 ಲಕ್ಷ ಕೋಟಿ ವೆಚ್ಚದಡಿ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಒಟ್ಟು 21,355 ಕಿ.ಮೀ ಉದ್ದದ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದ್ದಾರೆ.
ಪ್ರಸ್ತುತ ಅಸ್ಸಾಂ ₹57,696 ಕೋಟಿ, ಬಿಹಾರ ₹90 ಸಾವಿರ ಕೋಟಿ ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ. ಪಶ್ಚಿಮ ಬಂಗಾಳ ₹42 ಸಾವಿರ ಕೋಟಿ, ಜಾರ್ಖಂಡ್ ₹53 ಸಾವಿರ ಕೋಟಿ ಮತ್ತುಒಡಿಶಾದಲ್ಲಿ ₹58 ಸಾವಿರ ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಹೆದ್ದಾರಿ ಜಾಲದ ವಿಸ್ತರಣೆಯು ಸುಧಾರಣೆ ಕಂಡಿದೆ. 2014ರಲ್ಲಿ ದೇಶದಲ್ಲಿದ್ದ ಹೆದ್ದಾರಿಗಳ ಉದ್ದ 91,287 ಕಿ.ಮೀ. ಈಗ 1.46 ಲಕ್ಷ ಕಿ.ಮೀ.ಗೆ ವಿಸ್ತರಣೆಯಾಗಿದೆ. ಗುಣಮಟ್ಟದಲ್ಲೂ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.
ಕ್ಷಿಪ್ರ ಸಾರಿಗೆ ವ್ಯವಸ್ಥೆ: ನಾಗಪುರದಲ್ಲಿ ₹170 ಕೋಟಿ ವೆಚ್ಚದಡಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಪ್ರಾಯೋಗಿಕ ಯೋಜನೆ ಅನುಷ್ಠಾನಗೊಂಡಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಇ–ಬಸ್‌ಗಳಲ್ಲಿ ಏಕಕಾಲಕ್ಕೆ 135 ಮಂದಿ ಪ್ರಯಾಣಿಸಬಹುದಾಗಿದೆ. ಇದು ಯಶಸ್ವಿಯಾದರೆ ದೇಶದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
2024–25ರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಹೊಸದಾಗಿ 5,614 ಕಿ.ಮೀ ಉದ್ದದಷ್ಟು ಹೆದ್ದಾರಿಯನ್ನು ಅಭಿವೃದ್ಧಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.