ನವದೆಹಲಿ: ಬೆಲೆ ಕುಸಿತದಿಂದ ಕಂಗಾಲಾಗಿರುವ ಆಂಧ್ರಪ್ರದೇಶದ ಒಣಮೆಣಸಿನಕಾಯಿ ಬೆಳೆಗಾರರಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಟ್ಟಿಗೆ ಬೆಲೆ ಕುಸಿತದ ಬಗ್ಗೆ ಚರ್ಚಿಸಿದರು. ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ, ಕೇಂದ್ರವು ತ್ವರಿತವಾಗಿ ಖರೀದಿ ಆರಂಭಿಸಬೇಕು ಎಂದು ಕೋರಿದರು.
ಇದಕ್ಕೆ ಉತ್ತರಿಸಿದ ಸಚಿವ ಚೌಹಾಣ್, ‘ಒಣಮೆಣಸಿನಕಾಯಿ ರಫ್ತಿಗೆ ಸಂಬಂಧಿಸಿದಂತೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ. ಆ ಮೂಲಕ ಬೆಳೆಗಾರರಿಗೆ ನೆರವು ನೀಡಲಿದೆ’ ಎಂದರು.
ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಟೊಮೆಟೊ, ಈರುಳ್ಳಿ, ಆಲೂಗೆಡ್ಡೆ ಸೇರಿದಂತೆ ಬಹುಬೇಗ ಕೊಳೆತು ಹೋಗುವಂತಹ ಕೃಷಿ ಹುಟ್ಟುವಳಿಗಳನ್ನು ಖರೀದಿಸಲು ಅವಕಾಶವಿದೆ. ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆಯು ಹಿಂದಿನ ವರ್ಷಕ್ಕಿಂತ ಶೇ 10ರಷ್ಟು ಇಳಿಕೆಯಾದಾಗ ರಾಜ್ಯಗಳ ಕೋರಿಕೆ ಮೇರೆಗೆ ಅಂತಹ ಉತ್ಪನ್ನಗಳನ್ನು ಕೇಂದ್ರವು ಖರೀದಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.