ADVERTISEMENT

ಎಕ್ಸೈಸ್‌ ಸುಂಕ ವರಮಾನ ಶೇ 262ರಷ್ಟು ಹೆಚ್ಚಳ!

ಕೇಂದ್ರದ ಬೊಕ್ಕಸ ಭರ್ತಿ ಮಾಡಿದ ಎಕ್ಸೈಸ್‌ ಡ್ಯೂಟಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 18:21 IST
Last Updated 24 ಡಿಸೆಂಬರ್ 2018, 18:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕದಿಂದ ಕೇಂದ್ರ ಸರ್ಕಾರದ ವರಮಾನವು ನಾಲ್ಕು ವರ್ಷಗಳಲ್ಲಿ ಕ್ರಮವಾಗಿ ಶೇ 158 ಮತ್ತು ಶೇ 262ರಷ್ಟು ಹೆಚ್ಚಳಗೊಂಡಿದೆ.

ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕದಿಂದ 2017–18ರಲ್ಲಿ ₹ 1.50 ಲಕ್ಷ ಕೋಟಿ ಮತ್ತು ಪೆಟ್ರೋಲ್‌ನಿಂದ ₹ 73,516 ಕೋಟಿ ವರಮಾನ ಸಂಗ್ರಹಗೊಂಡಿದೆ. 2014–15ರಲ್ಲಿ ಡೀಸೆಲ್‌ ವರಮಾನವು ₹ 41,462 ಕೋಟಿ ಮತ್ತು 2013–14ರಲ್ಲಿನ ಪೆಟ್ರೋಲ್‌ ವರಮಾನವು ₹ 28,526 ಕೋಟಿಗಳಷ್ಟಿತ್ತು ಎಂದು ಸರ್ಕಾರ ಸಂಸತ್ತಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯು ಈಗ ಶೇ 30ರಷ್ಟು ಕಡಿಮೆಯಾಗಿದ್ದರೂ, ಇಂಧನಗಳ ಬೆಲೆ ಈಗಲೂ ಗರಿಷ್ಠ ಮಟ್ಟದಲ್ಲಿ ಇದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ದುಬಾರಿ ತೆರಿಗೆಗಳೇ ಕಾರಣ. ಕೇಂದ್ರವು ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ₹ 19.48 ಮತ್ತು ಡೀಸೆಲ್‌ ಮೇಲೆ ₹ 15.88ರಂತೆ ಎಕ್ಸೈಸ್‌ ಸುಂಕ ವಿಧಿಸಿದೆ.

ADVERTISEMENT

2014ರಲ್ಲಿ ಪ್ರತಿ ಲೀಟರ್‌ಗೆ₹ 50ರಷ್ಟಿದ್ದ ಡೀಸೆಲ್‌ ಬೆಲೆ, ಈಗ ₹ 64ಕ್ಕೆ ಏರಿದೆ. ಪ್ರಸಕ್ತ ವರ್ಷ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ನಡುವಣ ವ್ಯತ್ಯಾಸವೂ ಗಮನಾರ್ಹವಾಗಿ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಸೋಮವಾರ ಪೆಟ್ರೋಲ್‌ ಬೆಲೆ ₹ 70.42 ಇದ್ದರೆ, ಡೀಸೆಲ್‌ ಬೆಲೆ ₹ 64.18 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.