ADVERTISEMENT

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ವಿರುದ್ಧ ಒಟ್ಟಾಗಿ ದೂರು ಸಲ್ಲಿಸಿ: ಸಿಎಫ್‌ಎಂಎ

ಪಿಟಿಐ
Published 26 ಸೆಪ್ಟೆಂಬರ್ 2020, 15:31 IST
Last Updated 26 ಸೆಪ್ಟೆಂಬರ್ 2020, 15:31 IST

ನವದೆಹಲಿ: ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ ಸಂಸ್ಥೆಯು ವಿರುದ್ಧ ಎಲ್ಲಾ ಹೂಡಿಕೆದಾರರು ಒಟ್ಟಾಗಿ ಅದರ ವಿರುದ್ಧ ಪ್ರಕರಣ ದಾಖಲಿಸುವಂತೆ ಚೆನ್ನೈ ಫೈನಾನ್ಶಿಯಲ್‌ ಮಾರ್ಕೇಟ್ಸ್ ಆ್ಯಂಡ್‌ ಅಕೌಂಟೆಬಿಲಿಟಿ (ಸಿಎಫ್‌ಎಂಎ) ಮನವಿ ಮಾಡಿದೆ.

ಸಂಸ್ಥೆಯು ತನ್ನ ಆರು ಸಾಲ ನಿಧಿಗಳನ್ನು ರದ್ದುಪಡಿಸಿರುವುದರಿಂದ ಹೂಡಿಕೆದಾರರಿಗೆ ಭಾರಿ ಪ್ರಮಾಣದ ನಷ್ಟವಾಗಿದೆ. ಹೀಗಾಗಿ ಎಲ್ಲರೂ ಒಟ್ಟಾಗಿ ಚೆನ್ನೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗಕ್ಕೆ ತಮ್ಮ ದೂರುಗಳನ್ನು ನೀಡುವಂತೆ ಮನವಿ ಮಾಡಿದೆ. ಇದರಿಂದ ಎಲ್ಲಾ ದೂರುಗಳು ಒಟ್ಟಾಗಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ. ಮದ್ರಾಸ್‌ ಹೈಕೋರ್ಟ್‌ನಲ್ಲಿ ಈಗಾಗಲೇ ತಾನು ಕಾನೂನು ಸಮರ ಆರಂಭಿಸಿರುವುದಾಗಿಯೂ ಪ್ರಕಟಣೆಯಲ್ಲಿ ತಿಳಿಸಿದೆ.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಟ್ರಸ್ಟೀ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಅವುಗಳ ಹಿರಿಯ ಅಧಿಕಾರಿಗಳ ವಿರುದ್ಧ ಆರ್ಥಿಕ ಅಪರಾಧಿಗಳ ವಿಭಾಗವು ಎಫ್‌ಐಆರ್‌ ದಾಖಲಿಸಿಕೊಂಡಿದೆ ಎಂದು ಹೇಳಿದೆ.

ADVERTISEMENT

ಅಕ್ರಮವಾಗಿ ಹಣ ಗಳಿಸುವ ಸಲುವಾಗಿ ಸಂಸ್ಥೆ ಮತ್ತು ಅದರ ಆಡಳಿತ ಮಂಡಳಿ ಪಿತೂರಿ ನಡೆಸಿದೆ. ಇದರಿಂದಾಗಿ 3 ಲಕ್ಷ ಹೂಡಿಕೆದಾರರಿಗೆ ನಷ್ಟ ಉಂಟಾಗಿದೆ ಎಂದು ಸಿಎಫ್‌ಎಂಎ ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಫ್ರ್ಯಾಂಕ್ಲಿನ್ ಟೆಂಪಲ್‌ಟನ್‌ ಅಲ್ಲಗಳೆದಿದೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಹೂಡಿಕೆ ನಿರ್ಧಾರ ಮತ್ತು ಯೋಜನೆಗಳನ್ನು ರದ್ದುಪಡಿಸುವ ಸಂಬಂಧ ಅಗತ್ಯವಾದ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.